ADVERTISEMENT

ಕೃಷಿ ಉತ್ಪನ್ನಗಳಿಗೂ ದರ ನಿಗದಿಯಾಗಲಿ

ವಸ್ತು ಪ್ರದರ್ಶನದಲ್ಲಿ ಶಾಸಕ ಪ್ರೀತಂ ಜೆ.ಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಜೂನ್ 2018, 16:37 IST
Last Updated 28 ಜೂನ್ 2018, 16:37 IST
ಹಾಸನ ತಾಲ್ಲೂಕಿನ ಕಟ್ಟಾಯದಲ್ಲಿ ನಡೆದ ಕೃಷಿ ಅಭಿಯಾನ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಶಾಸಕ ಪ್ರೀತಂ ಜೆ.ಗೌಡ ಉದ್ಘಾಟಿಸಿದರು.
ಹಾಸನ ತಾಲ್ಲೂಕಿನ ಕಟ್ಟಾಯದಲ್ಲಿ ನಡೆದ ಕೃಷಿ ಅಭಿಯಾನ ಮತ್ತು ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಶಾಸಕ ಪ್ರೀತಂ ಜೆ.ಗೌಡ ಉದ್ಘಾಟಿಸಿದರು.   

ಪ್ರಜಾವಾಣಿ ವಾರ್ತೆ
ಹಾಸನ : ಕೃಷಿ ಉತ್ಪನ್ನಗಳ ಬೆಲೆ ದಿನನಿತ್ಯ ಏರುಪೇರಾಗುತ್ತಿರುವ ಕಾರಣ ಸೂಕ್ತ ದರ ಸಿಗದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ನಿತ್ಯ ಬಳಕೆ ವಸ್ತುಗಳಿಗೆ ನಿಗದಿಪಡಿಸಿದಂತೆ ಕೃಷಿ ಉತ್ಪನ್ನಗಳಿಗೂ ದರ ನಿಗದಿ ಮಾಡಿದರೆ ಅನುಕೂಲವಾಗಲಿದೆ ಎಂದು ಶಾಸಕ ಪ್ರೀತಂ ಜೆ.ಗೌಡ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಕಟ್ಟಾಯದಲ್ಲಿ ನಡೆದ ಕೃಷಿ ಅಭಿಯಾನ ಮತ್ತು ವಸ್ತು ಪ್ರದರ್ಶನ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೆಲೆ ನಿಗದಿಗೆ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ. ಆಧುನಿಕ ಯುಗದಲ್ಲಿ ರೈತರ ಬದುಕು ದುಸ್ತರವಾಗಿದ್ದು, ಕೃಷಿ ಒಂದು ಜೂಜಾಟವಾಗಿದೆ. ಬೆಳೆ ಬೆಳೆಯುವ ಮುಂಚೆಯೇ ಉತ್ಪನ್ನಗಳಿಗೆ ನಿಗದಿತ ಬೆಲೆ ಗೊತ್ತುಪಡಿಸಿದರೆ ರೈತರು ಲಾಭ ನಷ್ಟದ ಲೆಕ್ಕಾಚಾರ ಅನುಗುಣವಾಗಿ ಬೆಳೆ ಬೆಳೆಯುತ್ತಾರೆ ಎಂದು ನುಡಿದರು.

ADVERTISEMENT

ಕೃಷಿ ಅಧಿಕಾರಿಗಳು ಮತ್ತು ವಿಸ್ತರಣಾ ಕಾರ್ಯಕರ್ತರು ರೈತರ ಜಮೀನುಗಳಿಗೆ ಭೇಟಿ ನೀಡಿ ಇಲಾಖಾ ಯೋಜನೆಗಳು ಮತ್ತು ತಾಂತ್ರಿಕ ಸಲಹೆಗಳನ್ನು ನೀಡಿ ಅವರ ಆರ್ಥಿಕ ಮಟ್ಟ ಸುಧಾರಣೆಗೆ ಮುಂದಾಗಬೇಕು ಎಂದು ಹೇಳಿದರು.
ಸಹಾಯಕ ಕೃಷಿ ನಿರ್ದೇಶಕ ಭಾನುಪ್ರಕಾಶ್ ಅವರು ಕೃಷಿ ಇಲಾಖೆಯ ರೈತಪರ ಯೋಜನೆಗಳ ಪರಿಚಯ ಮಾಡಿಕೊಟ್ಟರು. ಕೃಷಿ ಅಭಿಯಾನ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.

ಕೃಷಿಯಲ್ಲಿ ಏರುಪೇರು ಸಾಮಾನ್ಯವಾಗಿದ್ದು, ಯಾವ ರೈತರು ಆತ್ಮಹತ್ಯೆ ಪರಿಹಾರವೆಂದು ಆಲೋಚಿಸಬಾರದು. ಕೃಷಿ ಪರಿಕರಗಳು ರಿಯಾಯಿತಿ ದರದಲ್ಲಿ ಲಭ್ಯವಿದ್ದು, ರೈತ ಸಂಪರ್ಕ ಕೇಂದ್ರಗಳಿಂದ ಇವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಕೆವಿಕೆ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ರಾಜೇಗೌಡ, ಭತ್ತ ಹಾಗೂ ರಾಗಿಯಲ್ಲಿ ಬರುವ ಶಿಲೀಂದ್ರ ರೋಗಗಳ ಹತೋಟಿಗೆ ಬೀಜೋಪಚಾರ ಪ್ರಾತ್ಯಕ್ಷಿಕೆ ನೀಡಿದರು.

ತಾಲ್ಲೂಕಿನ ಪ್ರಮುಖ ಬೆಳೆಗಳಾದ ಮುಸುಕಿನ ಜೋಳ, ಆಲೂಗಡ್ಡೆ, ಶುಂಠಿ ಹಾಗೂ ರಾಗಿಯಲ್ಲಿ ಕಂಡುಬರುವ ಕೀಟಗಳ ಬಾಧೆಯ ಹತೋಟಿಗೆ ಪರಿಸರ ಸ್ನೇಹಿ ಕ್ರಮಗಳು ಮತ್ತು ಸಮಗ್ರ ಕೀಟ ನಿವಾರಣೆ ಕ್ರಮಗಳ ಬಗ್ಗೆ ಕೆ.ಎಂ.ಮುನಿಸ್ವಾಮಿಗೌಡ ಮಾಹಿತಿ ನೀಡಿದರು.

ತಾಲ್ಲೂಕಿನ ಸಿಂಗಪಟ್ಟಣ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಪದ್ಮರಾಜು ಅವರ ಪತ್ನಿ ವಿ. ರೇಣುಕಾಗೆ ₹ 5 ಲಕ್ಷ ಪರಿಹಾರದ ಚೆಕ್‌ ಮತ್ತು ಮಾಸಾಶನದ ದೃಢೀಕರಣ ಪತ್ರವನ್ನು ಪ್ರೀತಂ ಜೆ.ಗೌಡ ವಿತರಿಸಿದರು.
ಕಂದಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ದಾಸೇಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯ ಎಂ.ಪಿ. ಪ್ರದೀಪ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಕೃಷಿ ಸಂಬಂಧಿತ ಇಲಾಖೆಯ ಸಹಾಯಕ ನಿರ್ದೇಶಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.