ಹೊಳೆನರಸೀಪುರ: ಪಟ್ಟಣದಲ್ಲಿ ಅಕ್ಷಯ ತೃತೀಯ ಪ್ರಯುಕ್ತ ಬುಧವಾರ ಚಿನ್ನ– ಬೆಳ್ಳಿ ವರ್ತಕರು ಭರ್ಜರಿ ವ್ಯಾಪಾರ ನಡೆಸಿದರು. ಆಭರಣ ಚಿನ್ನವೂ ಸಿದ್ಧಗೊಂಡು ಗ್ರಾಹಕರ ಕೈಸೇರುವ ಸಮಯದಲ್ಲಿ ₹1 ಲಕ್ಷ ಗಡಿ ದಾಟುತ್ತಿದ್ದರೂ ಚಿನ್ನ ಖರೀದಿಯಲ್ಲಿ ಜನರ ಉತ್ಸಾಹ ಕಂಡು ಬಂತು.
ಭಾರತೀಯ ಸಂಸ್ಕೃತಿಯಲ್ಲಿ ಅಕ್ಷಯ ತೃತೀಯ ಅಥವಾ ಬಸವ ಜಯಂತಿಯಂದು ಚಿನ್ನ ಖರೀದಿಸಿದರೆ ಒಳ್ಳೆಯದು ಎಂಬ ನಂಬಿಕೆ ಇದ್ದು, ವಿವಿಧ ವಿನ್ಯಾಸದ ಒಡವೆಗಳನ್ನು ಮುಂಗಡವಾಗಿ ಹಣ ನೀಡಿ ಗೃಹಣಿಯರು ಸಿದ್ದಪಡಿಸಲು ಸೂಚಿಸಿ, ಅಕ್ಷಯ ತೃತೀಯದಂದು ಪಡೆಯುತ್ತಾರೆ.
ತಾಲ್ಲೂಕು ಕೇಂದ್ರಗಳಲ್ಲಿ ಅಕ್ಷಯ ತೃತೀಯದಂದು ಯಾವುದೇ ಪ್ರಚಾರವಿಲ್ಲದೇ ಇದ್ದರೂ ಜನರು ಆಭರಣ ಅಂಗಡಿಗಳಿಗೆ ಭೇಟಿ ನೀಡಿ, ಖರೀದಿಯಲ್ಲಿ ತೊಡಗಿದ್ದರು.
ಅಕ್ಷಯ ತೃತೀಯ ಹಾಗೂ ಬಸವ ಜಯಂತಿ ಪ್ರಯುಕ್ತ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದಲ್ಲಿ ಸರ್ವೆ ಜನ ಸುಖಿನೋ ಭವಂತು ಸಂಕಲ್ಪದೊಂದಿಗೆ ಸ್ವಾಮಿಯ ಮೂಲ ವಿಗ್ರಹಕ್ಕೆ ಅಭಿಷೇಕ, ಅಲಂಕಾರ ನೆರವೇರಿಸಿ, ಸಹಸ್ರ ನಾಮರ್ಚನೆ, ಮಹಾ ಮಂಗಳಾರುತಿ ಮಾಡಲಾಯಿತು. ಭಕ್ತರಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.