ಅರಸೀಕೆರೆ: ಸರ್ಕಾರಿ ಬಸ್ ನೌಕರರು ಮಂಗಳವಾರದಿಂದ ಪ್ರತಿಭಟನೆ ಆರಂಭಿಸಿದ್ದು ಅರಸೀಕೆರೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು , ಕಚೇರಿಗೆ ತೆರಳುವ ನೌಕರರು , ಸಾಮಾನ್ಯ ಜನರು ಪರದಾಡುವಂತಾಯಿತು.
ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಸುಕಿನಿಂದಲೇ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸದೆ, ಡಿಪೋ ಆವರಣದಲ್ಲಿ ನಿಲುಗಡೆಗೊಳಿಸಲಾಗಿತ್ತು. ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಖಾಸಗಿ ಪ್ರಯಾಣಿಕ ವಾಹನಗಳ ದರ್ಬಾರ್ ಜೋರಾಗಿತ್ತು. ಇವುಗಳಲ್ಲಿ ಪ್ರಯಾಣ ದರ ಹೆಚ್ಚಾಗಿದ್ದರೂ ಅನಿವಾರ್ಯವಾಗಿ ಜನರು ಪ್ರಯಾಣಿಸಿದರು.
ಅರಸೀಕೆರೆ ಸಾರಿಗೆ ಡಿಪೊಲ್ಲಿ 110 ಬಸ್‌ಗಳಿದ್ದು, 80ಕ್ಕೂ ಹೆಚ್ಚು ಬಸ್‌ಗಳು ಇಲ್ಲಿಗೆ ತಲುಪಿವೆ, ಹೊರ ಊರುಗಳಿಗೆ ಹೋಗಿದ್ದ ಬಸ್‌ಗಳನ್ನು ಅಲ್ಲಲ್ಲಿಯೇ ನಿಲುಗಡೆಗೊಳಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಪ್ರಯಾಣಿಕರಿಗಾಗಿ ಪೊಲೀಸರೇ ಖಾಸಗಿ ವಾಹನಗಳನ್ನು ಬಳಸಿ ಸಂಚಾರಕ್ಕೆ ಜನರ ಸಂಚಾರಕ್ಕೆ ಬಳಸುತ್ತಿದ್ದರು. ಮುಷ್ಕರದ ಮಾಹಿತಿ ಇದ್ದುದರಿಂದ ಪ್ರಯಾಣಿಕರ ಸಂಚಾರ ಕಡಿಮೆಯಾಗಿತ್ತು.
ಸಾರಿಗೆ ಇಲಾಖೆಯ ನೌಕರ ಮೂರ್ತಿಕೆರೆ ಮಂಜುನಾಥ್ ಮಾತನಾಡಿ, ಸಾರಿಗೆ ಇಲಾಖೆಯ ನೌಕರರ ಸೇವೆಗೆ ತಕ್ಕ ಪುರಸ್ಕಾರವನ್ನು ಸರ್ಕಾರ ನೀಡುತ್ತಿಲ್ಲ. ದಿನವಹಿ ಸಾಮಗ್ರಿಗಳು, ಶಿಕ್ಷಣ , ಆರೋಗ್ಯ ವೆಚ್ಚ ದುಬಾರಿಯಾಗಿವೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ, ಬೇಡಿಕೆಯನ್ನು ಈಡೇರಿಸುವ ಮೂಲಕ ಸಾರಿಗೆ ಇಲಾಖೆ ನೌಕರ ಹಿತ ರಕ್ಷಿಸಬೇಕಿದೆ ಎಂದು ಆಗ್ರಹಿಸಿದರು.
ಬಿಜೆಪಿ ಮುಖಂಡ ಜಿ.ಎನ್.ಮನೋಜ್‌ಕುಮಾರ್ ಮಾತನಾಡಿ, ‘ ಗ್ಯಾರಂಟಿ ಯೋಜನೆಗಳಿಂದ ಸಾರಿಗೆ ಸಂಸ್ಥೆ , ಸರ್ಕಾರಿ ನೌಕರರಿಗೆ ವೇತನ ನೀಡಲಾಗದೆ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮುಷ್ಕರದಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿತ್ತಿದ್ದು ಸರ್ಕಾರ ಶೀಘ್ರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.