ADVERTISEMENT

ಪ್ರಕೃತಿ ವಿಕೋಪ ಎದುರಿಸಲು ಸಜ್ಜಾಗಿರಿ: ತಹಶೀಲ್ದಾರ್‌ ಮಲ್ಲಿಕಾರ್ಜುನ ಸೂಚನೆ

ಮುಂಗಾರು ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2025, 14:22 IST
Last Updated 18 ಜೂನ್ 2025, 14:22 IST
ಆಲೂರು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಕೃತಿ ವಿಕೋಪ ಮುನ್ನೆಚ್ಚರಿಕೆ ಸಭೆಯಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ ಮಾತನಾಡಿದರು 
ಆಲೂರು ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಕೃತಿ ವಿಕೋಪ ಮುನ್ನೆಚ್ಚರಿಕೆ ಸಭೆಯಲ್ಲಿ ತಹಶೀಲ್ದಾರ್ ಮಲ್ಲಿಕಾರ್ಜುನ ಮಾತನಾಡಿದರು    

ಆಲೂರು: ಮಳೆಗಾಲ ತೀವ್ರ ಆಗಿರುವುದರಿಂದ ಪ್ರಕೃತಿ ವಿಕೋಪದಲ್ಲಿ ಆಕಸ್ಮಿಕವಾಗಿ ಎದುರಾಗುವ ದುಷ್ಪರಿಣಾಮಗಳನ್ನು ಎದುರಿಸಲು ಎಲ್ಲ ಇಲಾಖೆ ಅಧಿಕಾರಿಗಳು ಸದಾ ಸಿದ್ಧರಾಗಿರಬೇಕು ಎಂದು ತಹಶೀಲ್ದಾರ್ ಮಲ್ಲಿಕಾರ್ಜುನ ಸೂಚನೆ ನೀಡಿದರು.

ಪಟ್ಟಣದ ಮಿನಿ ವಿಧಾನಸೌಧ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಕೃತಿ ವಿಕೋಪ ಮುನ್ನೆಚ್ಚರಿಕೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ಪತ್ರ ಬರೆದು, ಉತ್ತರಕ್ಕಾಗಿ ಕಾಯದೇ ಕೆಲಸ ಕಾರ್ಯಗತವಾಗಿರುವ ಬಗ್ಗೆ ಮನದಟ್ಟು ಮಾಡಿಕೊಳ್ಳಬೇಕು ಎಂದು ಒತ್ತಿ ಹೇಳಿದರು.

ಮುಂಜಾಗ್ರತೆಗಾಗಿ ಆರೋಗ್ಯ ಇಲಾಖೆಯಲ್ಲಿ ತುರ್ತು ಪ್ರಥಮ ಚಿಕಿತ್ಸೆ ತಂಡ ಸದಾ ಸಿದ್ಧವಿರಬೇಕು. ಈಜುಗಾರರ ತಂಡವನ್ನು ಗುರುತಿಸಿಕೊಂಡಿರಬೇಕು. ವಾಟೆಹೊಳೆ ಜಲಾಶಯದಿಂದ ನೀರನ್ನು ಹೊರಬಿಡುವ ಮುನ್ನ, ಜಲಾಶಯ ಮತ್ತು ಕಾಲುವೆ ಪಾತ್ರದ ಅಕ್ಕಪಕ್ಕದಲ್ಲಿರುವ ಹಳ್ಳಿಗಳಿಗೆ ಧ್ವನಿವರ್ಧಕ ಮೂಲಕ ಜನ-ಜಾನುವಾರುಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಲು ಸಲಹೆ ಮತ್ತು ಸೂಚನೆ ನೀಡಬೇಕು ಎಂದರು.

ADVERTISEMENT

ಕೆರೆಗಳ ಹೆಚ್ಚುವರಿ ನೀರು ತೂಬಿನಲ್ಲಿ ಹರಿಯುವಾಗ ಮೀನುಗಳು ಹೊರ ಹೋಗುತ್ತವೆ ಎಂಬ ಉದ್ದೇಶದಿಂದ ಸ್ಥಳೀಯರು ಜಾಲರಿ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಜಾಲರಿಗೆ ಕಸಕಡ್ಡಿ ತುಂಬಿಕೊಂಡು ತೂಬಿನ ಮೂಲಕ ಮೂಲಕ ಹೊರಹರಿಯದೆ ಅಚ್ಚುಕಟ್ಟು ಪ್ರದೇಶಕ್ಕೆ ಹರಿಯುತ್ತದೆ. ಏರಿ ತುಂಡಾಗುವ ಸಾಧ್ಯತೆ ಇರುತ್ತದೆ. ಕೆರೆಗೆ ಜಾಲರಿ ಹಾಕಿದ್ದರೆ ತೆರವುಗೊಳಿಸಿ, ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಎತ್ತಿನಹೊಳೆ ನೀರು ಕಾಲುವೆಯಲ್ಲಿ ಸರಾಗವಾಗಿ ಹರಿಯಲು ಅಡೆತಡೆಗಳಿದ್ದರೆ ತೆರವುಗೊಳಿಸಬೇಕು. ಆಲೂರು-ಮಗ್ಗೆ ಮತ್ತು ಆಲೂರು-ಬಿಕ್ಕೋಡು ರಸ್ತೆಯಂಚಿನ ಎರಡೂ ಕಡೆ ಬಾಗಿರುವ ಮರಗಳ ಕೊಂಬೆಗಳನ್ನು ತೆರವುಗೊಳಿಸಬೇಕು. ಶಾಲೆ ಮತ್ತು ಅಂಗನವಾಡಿ ಕಟ್ಟಡಗಳ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು ಎಂದರು.

ಸಭೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಿಸಾರ್ ಫಾತಿಮ, ಪೊಲೀಸ್ ಇನ್‌ಸ್ಪೆಕ್ಟರ್ ಮೋಹನರೆಡ್ಡಿ, ಪ.ಪಂ. ಮುಖ್ಯಾಧಿಕಾರಿ ಮಂಜುನಾಥ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‍ಕುಮಾರ್, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೇಶವ್, ವಾಟೆಹೊಳೆ ಸಹಾಯಕ ಎಂಜಿನಿಯರ್ ಸಂದೀಪ್, ಸಿಡಿಪಿಒ ಎ. ಟಿ. ಮಲ್ಲೇಶ್, ತಾ. ಪಂ. ವ್ಯವಸ್ಥಾಪಕ ರಮೇಶ್, ಅರಣ್ಯ ಇಲಾಖೆ, ಸೆಸ್ಕ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.