ADVERTISEMENT

ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ: ಸಚಿವೆ ಶೋಭಾ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 3:56 IST
Last Updated 5 ಜುಲೈ 2022, 3:56 IST
ಹಾಸನದ ಕೃಷಿ ಮಹಾವಿದ್ಯಾಲಯದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ, ವಿದ್ಯಾರ್ಥಿನಿಯರ ಜೊತೆ ಸಮಾಲೋಚನೆ ನಡೆಸಿದರು.
ಹಾಸನದ ಕೃಷಿ ಮಹಾವಿದ್ಯಾಲಯದಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ, ವಿದ್ಯಾರ್ಥಿನಿಯರ ಜೊತೆ ಸಮಾಲೋಚನೆ ನಡೆಸಿದರು.   

ಹಾಸನ: ಇಂದಿಗೂ ದೇಶದಲ್ಲಿ ಮೋದಿ ಕಡೆ ಜನರ ಒಲವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಆ ಪಕ್ಷದ ನಾಯಕರು ಕೇವಲ ಭ್ರಮೆಯಲ್ಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಡೀ ದೇಶ ಮೋದಿ ಅವರ ಅಭಿವೃದ್ಧಿ ಕಡೆಗೆ ನೋಡುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್–19 ಎದುರಾದಾಗ ಜನರ ಜೀವ ರಕ್ಷಣೆಗೆ ಹಗಲಿರುಳು ದುಡಿದಿದ್ದಾರೆ. ಇದನ್ನು ಜನ ಮರೆಯುವುದಿಲ್ಲ. ಕರ್ನಾಟಕದ ಜನ ಬಿಜೆಪಿ ಜೊತೆಗಿದ್ದು, ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬರುವುದಾಗಿ ಕೇವಲ ಭ್ರಮೆಯಲ್ಲಿ ಇದ್ದಾರೆ’ ಎಂದು ಟೀಕಿಸಿದರು.

ADVERTISEMENT

‘ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಮುಂದುವರಿದಿದ್ದು ಅವರಲ್ಲಿಯೇ ಸಾಮರಸ್ಯ ಇಲ್ಲ, ಒಬ್ಬ ನಾಯಕರು 120 ಎಂದರೆ ಮತ್ತೊಬ್ಬರು 150 ಸ್ಥಾನ ಎಂದು ಹೇಳುವ ಮೂಲಕ ಹೊಂದಾಣಿಕೆಯ ಕೊರತೆ ಇರುವುದನ್ನು ಸಾಬೀತು ಮಾಡುತ್ತಿದ್ದಾರೆ. ಅವರಲ್ಲಿರುವ ಗುಂಪುಗಾರಿಕೆ ಮರೆಮಾಚಲು ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ’ ಎಂದರು.

ಪ್ರತ್ಯೇಕ ರಾಜ್ಯ:ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿ ಎಂಬ ವಿಚಾರದಲ್ಲಿ ‘ಸಮಯ ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು. ಕಾಲಾಯ ತಸ್ಮೈ ನಮಃ’ ಎಂದು ಹೇಳುವ ಮೂಲಕ ಸಚಿವ ಬಿ.ಸಿ ಪಾಟೀಲ ಅವರು, ಸಚಿವ ಉಮೇಶ ಕತ್ತಿ ಹೇಳಿಕೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು.

‘ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿ ಎಂಬುದು ಉಮೇಶ್ ಕತ್ತಿ ಅವರ ಅಭಿಪ್ರಾಯ. ಅವರ ಅಭಿಪ್ರಾಯಕ್ಕೆ ಎಲ್ಲರೂ ಮನ್ನಣೆ ಕೊಡಬೇಕು ಎಂದೇನಿಲ್ಲ. ಆದರೆ ಸಮಯ, ಸಂದರ್ಭ ಬಂದಾಗ ಏನು ಬೇಕಾದರೂ ಆಗಬಹುದು’ ಎಂದು ಹೇಳಿದ ಅವರು, ‘ಆ ರೀತಿ ಆಗುವುದಿಲ್ಲ ಎಂದು ಪ್ರತಿಪಾದನೆ ಮಾಡುತ್ತಿಲ್ಲ. ಅದೇ ರೀತಿ ಯಾವುದೂ ಆಗಲ್ಲ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ವಿದ್ಯಾರ್ಥಿಗಳನ್ನು ವಿಚಾರಿಸಿದ ಶೋಭಾ
ವಸತಿ ನಿಲಯಗಳನ್ನು ಉದ್ಘಾಟಿಸಿ ನಂತರ ವಿದ್ಯಾರ್ಥಿನಿಯರ ಕುಶಲೋಪರಿ ವಿಚಾರಿಸಿದ ಸಚಿವೆ ಶೋಭಾ ಕರಂದ್ಲಾಜೆ, ಹಾಸ್ಟೆಲ್ ಊಟೋಪಚಾರ ಹೇಗಿದೆ? ಯಾವ ಬಗೆಯ ತಿಂಡಿ ಮಾಡುತ್ತಾರೆ ಎಂದು ಕೇಳಿದರು‌.

ವಸತಿ ಗೃಹ ಮತ್ತು ಅಡುಗೆ ಕೋಣೆ ವೀಕ್ಷಿಸಿದ ಅವರು, ವಿದ್ಯಾರ್ಥಿಗಳಿಗೆ ಊಟ, ವಸತಿಯಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ವಹಿಸಲು ಕಾಲೇಜು ಆಡಳಿತಾಧಿಕಾರಿಗಳಿಗೆ ಸೂಚಿಸಿದರು‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.