ADVERTISEMENT

ಬಿಲ್‌ ಪಾಸ್ ಮಾಡಲು ಲಂಚ: ತನಿಖೆಗೆ ಆಗ್ರಹ

ನಗರದಲ್ಲಿ ತಲೆ ಎತ್ತಿರುವ ಅನಧಿಕೃತ ಬಡಾವಣೆ: ರೇವಣ್ಣ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2021, 13:32 IST
Last Updated 25 ಮಾರ್ಚ್ 2021, 13:32 IST
 ರೇವಣ್ಣ
 ರೇವಣ್ಣ   

ಹಾಸನ: ಸರ್ಕಾರ ವಿವಿಧ ಇಲಾಖೆಗಳಲ್ಲಿ ಕಾಮಗಾರಿಗಳ ಬಿಲ್‌ ಪಾವತಿಗೆ ಅಧಿಕಾರಿಗಳು ಗುತ್ತಿಗೆದಾರರಿಂದ ಬಿಲ್‌ ಮೊತ್ತದ ಶೇಕಡಾ 25ರಷ್ಟು ವಸೂಲಿ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಆಗ್ರಹಿಸಿದರು.

ಅಧಿಕಾರಿಗಳು ಯಾರ ಹೆಸರು ಹೇಳಿಕೊಂಡು ಹಣ ವಸೂಲಿ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಮುಖ್ಯಮಂತ್ರಿ ಗಮನಹರಿಸಬೇಕು. ಉಪಗುತ್ತಿಗೆ ಪಡೆದವರು ಪಾಡು ಹೇಳತೀರದು. ಚಿನ್ನಾಭರಣ ಅಡವಿಟ್ಟು ಸಾಲ ತಂದು ಕೆಲಸ ಮಾಡಿಸಿದ್ದಾರೆ. ಕಾವೇರಿ ನೀರಾವರಿ ನಿಗಮದಲ್ಲಿ ಹಣ ಬಂದರೂ ಬಿಡುಗಡೆ ಮಾಡುತ್ತಿಲ್ಲ. ಕೆಲ ಅಧಿಕಾರಿಗಳು ಜೈಲಿಗೆ ಹೋಗಬೇಕಾದ ಸಂದರ್ಭದ ಬರಲಿದೆ. ಜಿಲ್ಲೆಯಲ್ಲಿ
ಹೇಳುವವರು, ಕೇಳುವವರು ಯಾರು ಇಲ್ಲ ಎಂದು ಗುರುವಾರ ಸುದ್ದಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಕೆಲ ಅಧಿಕಾರಿಗಳು ವರ್ಗಾವಣೆಗಾಗಿ ಕೆಲವರ ಪಾದ ಪೂಜೆ ಮಾಡುತ್ತಿದ್ದು, ಸಾರ್ವಜನಿಕರ ತೆರಿಗೆ
ಹಣದಿಂದ ಸಂಬಳ ಪಡೆಯುತ್ತಿರುವುದರಿಂದ ಯಾರೇ ಏನೇ ಹೇಳಿದರೂ ಕಾನೂನು ಉಲ್ಲಂಘಿಸಿ ಕೆಲಸ
ಮಾಡಬಾರದು. ಗುತ್ತಿಗೆದಾರರ ಕಣ್ಣೀರು ಹಾಕಿಸಿದರೆ ಮಕ್ಕಳು, ಮೊಮ್ಮಕ್ಕಳಿಗೆ ಖಂಡಿತ ಒಳ್ಳೆಯದಾಗುವುದಿಲ್ಲ
ಎಂದು ಎಚ್ಚರಿಸಿದರು.

ADVERTISEMENT

ನಗರ ಸುತ್ತಲಿನ ಕಾಟೀಹಳ್ಳಿ, ಸತ್ಯಮಂಗಲ, ಹರಳಹಳ್ಳಿ, ತೇಜೂರು ಗ್ರಾಮಗಳ ಪಂಚಾಯಿತಿ ಅಭಿವೃದ್ಧಿ
ಅಧಿಕಾರಿಗಳು ಅಕ್ರಮ ಮನೆ ನಿರ್ಮಿಸಿಕೊಡುತ್ತಿದ್ದಾರೆ. ಪ್ರಭಾವಿಗಳ ಪಾದ ಪೂಜೆ ಮಾಡಿ ವರ್ಗಾವಣೆ
ಮಾಡಿಸಿಕೊಳ್ಳುತ್ತಿದ್ದಾರೆ. ನನ್ನ ಅವಧಿಯಲ್ಲಿ ನಾಯಿಮರಿ ತರ ಇದ್ದ ಅಧಿಕಾರಿಗಳೆಲ್ಲ ಈಗ ಬದಲಾಗಿದ್ದಾರೆ ಎಂದರು.

ನಗರ ಸುತ್ತಲೂ ಅನಧಿಕೃತ ಬಡಾವಣೆಗಳು ತಲೆ ಎತ್ತಿದ್ದು, ಕಾನೂನು ಗಾಳಿಗೆ ತೂರಲಾಗುತ್ತಿದೆ. ನಾಲ್ಕು ದಶಕಗಳ
ನನ್ನ ರಾಜಕಾರಣದಲ್ಲಿ ಇಂತಹ ದುರಾಡಳಿತವನ್ನು ಎಂದೂ ಕಂಡಿಲ್ಲ. ನಗರ ಸಮೀಪದ ಬುಸ್ತೇನಹಳ್ಳಿ ಬಳಿ 30
ಎಕರೆ ಜಾಗದಲ್ಲಿ ಲೇಔಟ್‌ ಮಾಡಲು ಅನುಮತಿ ನೀಡಿದೆ. 1.82 ಲಕ್ಷ ಚದರ ಮೀಟರ್‌ ವಿಸ್ತೀರ್ಣದಲ್ಲಿ 82
ನಿವೇಶನ ಮಾಡಿದ್ದಾರೆ. ಇಲ್ಲಿಗೆ ವಿದ್ಯುತ್‌, ಕುಡಿಯುವ ನೀರು, ರಸ್ತೆ ಯಾವ ವ್ಯವಸ್ಥೆಯನ್ನು ಮಾಡಿಲ್ಲ. ರಾಜಕಾಲುವೆ
ಮುಚ್ಚಿ ಹಾಕಿದ್ದಾರೆ. ನಕ್ಷೆಯೇ ಮಂಜೂರಾಗದಿದ್ದರೂ ಮರಗಳನ್ನು ಕಡಿದು ಹಾಕಲಾಗಿದೆ. ಹಾಗಾದರೆ ಹುಡಾ, ಸೆಸ್ಕ್, ಅರಣ್ಯ
ಇಲಾಖೆ ಕೆಲಸವೇನು ಎಂದು ಪ್ರಶ್ನಿಸಿದರು.

ಖಾಸಗಿ ಲೇಔಟ್‌ಗಳಿಂದ ಇಂತಿಷ್ಟು ಜಾಗ ಬಿಟ್ಟುಕೊಡುವಂತೆ ಬೇಡಿಕೆ ಸಹ ಇಡುತ್ತಿದ್ದಾರೆ. ದುರಾವರ್ತನೆ ಹೀಗೆ
ಮುಂದುವರಿದರೆ ಅಧಿಕಾರಿಗಳು ಜೈಲಿಗೆ ಹೋಗಬೇಕಾಗುತ್ತದೆ. ಸಹಕಾರ ಇಲಾಖೆ ಲೂಟಿಕೋರರ ಕೈಯಲ್ಲಿದೆ.
ಒಬ್ಬ ಅಧಿಕಾರಿಗಳಿಗೆ ನಾಲ್ಕು ಕಡೆ ಜವಾಬ್ದಾರಿ ನೀಡಲಾಗಿದೆ. ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾದರೂ
ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದೊಂದು ಡಬಲ್ ಎಂಜಿನ್‌ ಸರ್ಕಾರ. ಅಂದರೇ ಕೇಂದ್ರ ಮತ್ತು ರಾಜ್ಯದ ಎಂಜಿನ್‌ ಖಾಲಿ ಇದ್ದು, ಎರಡಕ್ಕೂ
ಡೀಸೆಲ್‌ ತುಂಬಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.