ADVERTISEMENT

ಸಾರಿಗೆ ಸಮಸ್ಯೆ: ವಿದ್ಯಾರ್ಥಿಗಳು, ಪ್ರಯಾಣಿಕರ ಪರದಾಟ

ಗ್ರಾಮೀಣ ಭಾಗಕ್ಕೆ ಸಂಚರಿಸದ ಬಸ್‌ಗಳು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 12:45 IST
Last Updated 9 ಫೆಬ್ರುವರಿ 2021, 12:45 IST
ಅರಕಲಗೂಡು ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹತ್ತಲು ವಿದ್ಯಾರ್ಥಿಗಳು ಪ್ರಯಾಸ ಪಡುತ್ತಿರುವ ದೃಶ್ಯ.
ಅರಕಲಗೂಡು ಭಾಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಹತ್ತಲು ವಿದ್ಯಾರ್ಥಿಗಳು ಪ್ರಯಾಸ ಪಡುತ್ತಿರುವ ದೃಶ್ಯ.   

ಹಾಸನ: ಶಾಲಾ, ಕಾಲೇಜು ಆರಂಭಗೊಂಡಿದ್ದರೂ ಗ್ರಾಮೀಣ ಪ್ರದೇಶದಲ್ಲಿ ಬಸ್‌ ಸೌಲಭ್ಯ ಸರಿಯಾಗಿ
ಲಭ್ಯವಾಗದೇ ಇರುವುದರಿಂದ ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಸಮಯಕ್ಕೆ ಸರಿಯಾಗಿ ತೆರಳಲು
ಆಗುತ್ತಿಲ್ಲ.

ಅರಕಲಗೂಡು, ಅರಸೀಕೆರೆ, ಸಕಲೇಶಪುರ, ಬೇಲೂರು ತಾಲ್ಲೂಕುಗಳಲ್ಲಿ ಈ ಸಮಸ್ಯೆ ಹೆಚ್ಚಿದೆ. ಗ್ರಾಮೀಣ
ಭಾಗಗಳಿಗೆ ಸೂಕ್ತ ಸಮಯಕ್ಕೆ ಬಸ್ ಸಂಚಾರವಿಲ್ಲದೇ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರು
ಪರದಾಡುತ್ತಿದ್ದಾರೆ. ಬಸ್‌ಫುಟ್‌ ಬೋರ್ಡ್‌ ಮೇಲೆ ನಿಂತು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೋವಿಡ್‌ ನಂತರ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಆದರೆ ಈಗ ಸಹಜ ಸ್ಥಿತಿಗೆ ಮರಳುತ್ತಿದೆ. ಹಲವು ಕಡೆ ಬೆಳಿಗ್ಗೆ ಶಾಲಾ, ಕಾಲೇಜುಗಳಿಗೆ ತೆರಳುವ ಸಮಯ ಹಾಗೂ ಸಂಜೆ
ತರಗತಿಗಳು ಬಿಡುವ ಸಮಯಕ್ಕೆ ಸರಿಯಾಗಿ ಸಾಕಷ್ಟು ಬಸ್‌ಗಳು ಇಲ್ಲ. ಇರುವ ಒಂದೆರಡು ಬಸ್‌ಗಳಲ್ಲೇ
ಸಂಚರಿಸಬೇಕಾಗಿದೆ.

ADVERTISEMENT

ಅರಕಲಗೂಡು ತಾಲ್ಲೂಕಿನ ಸಂತೆ ಮರೂರು, ಉಚ್ಚಂಗಿ ಮತ್ತು ಸುತ್ತಮುತ್ತಲ ಗ್ರಾಮ, ಕೂಡು ರಸ್ತೆಗೆ
ಬೆರಳಣಿಕೆ ಬಸ್‌ಗಳು ಮಾತ್ರ ಸಂಚರಿಸುತ್ತವೆ. ಆ ಬಸ್‌ಗಳು ಸರಿಯಾದ ಸಮಯಕ್ಕೆ ಬರುವುದಿಲ್ಲ.ಕೆಲ ದಿನಗಳ ಹಿಂದೆ ಸಂತೆಮರೂರು ಗ್ರಾಮದಲ್ಲಿ ವಿದ್ಯಾರ್ಥಿಗಳು ಸಾರಿಗೆ ಬಸ್ ತಡೆದರು. ಚಾಲಕ, ನಿರ್ವಾಹಕಹಾಗೂ ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ ನಡೆಯಿತು.

‘ಸಾರಿಗೆ ಬಸ್‌ ಇಲ್ಲದ ಕಾರಣ ನಿತ್ಯ ₹40 ನೀಡಿ ಆಟೊದಲ್ಲಿ ಶಾಲಾ, ಕಾಲೇಜಿಗೆ ಹೋಗಿ ಬರುವ ಸಂಕಷ್ಟ ಪರಿಸ್ಥಿತಿಎದುರಾಗಿದೆ’ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕ ಕೆಲಸಗಳಿಗೆ, ಶಾಲಾ ಕಾಲೇಜುಗಳಿಗೆ ಹಾಗೂ ಇನ್ನಿತರ ಕೆಲಸಗಳಿಗೆ ಪಟ್ಟಣಕ್ಕೆ ಬರಲು
ಗ್ರಾಮಕ್ಕೆ ಬರುವ ಬೆರಳಣಿಕೆಯಷ್ಟು ಬಸ್‌ಗಳನ್ನೇ ಅವಲಂಬಿಸಬೇಕಿದೆ. ಇಲ್ಲದಿದ್ದರೆ ಆಟೊ, ಲಾರಿ, ಹಿಡಿದು
ಪಟ್ಟಣಕ್ಕೆ ಬರಬೇಕಾದ ಅನಿವಾರ್ಯತೆ ಎದುರಾಗಿದೆ.

ಅರಸೀಕೆರೆ ತಾಲ್ಲೂಕಿನಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ನಿತ್ಯ ಬಸ್‌ಗಾಗಿ ಕಾದು
ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅರಸೀಕೆರೆಯಿಂದ ಬಾಣಾವರ ಮತ್ತು ಕಣಕಟ್ಟೆ
ಪಂಚನಹಳ್ಳಿ ಮಾರ್ಗವಾಗಿ ಸಂಚರಿಸುವ ಬಸ್‌ಗಳ ಸಂಖ್ಯೆ ಬೆರಳಣಿಕೆಯಷ್ಟಿದೆ. ಈ ಮಾರ್ಗದಲ್ಲಿ
ಸಂಚರಿಸುವ ವೇಗಧೂತ ಬಸ್‌ಗಳು ಹಳ್ಳಿಗಳಲ್ಲಿ ನಿಲುಗಡೆ ಮಾಡುವುದಿಲ್ಲ. ಕಲ್ಲುಸಾದರಹಳ್ಳಿ, ಕಣಕಟ್ಟೆ,
ಸೋಮಶೆಟ್ಟಿಹಳ್ಳಿ ಮಕ್ಕಳು ಬಾಣಾವಾರ ತಲುಪಲು ನಿತ್ಯ ಪರದಾಡುವ ಪರಿಸ್ಥಿತಿ ಇದೆ.

‘ಕೆಎಸ್‌ಆರ್‌ಟಿಸಿಯು ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ವಿತರಣೆ ಆರಂಭಿಸಿದೆ. ಕಡಿಮೆ ಬಸ್‌ಗಳು
ಇರುವುದರಿಂದ ಬಹುತೇಕ ಬಸ್‌ಗಳು ಭರ್ತಿಯಾಗಿರುತ್ತವೆ. ಹಾಗಾಗಿ ನಿಲ್ಲುವುದಕ್ಕೂ
ಜಾಗ ಇರುವುದಿಲ್ಲ. ಕಷ್ಟ ಪಟ್ಟು ಬಾಗಿಲ ಬಳಿಯೇ ನಿಲ್ಲಬೇಕಾಗುತ್ತದೆ. ಪಾಸ್‌ ಹೊಂದಿರುವ ವಿದ್ಯಾರ್ಥಿಗಳು ಹೆಚ್ಚು ಮಂದಿ ಇದ್ದರೆ, ಚಾಲಕರು ಬಸ್‌ಗಳನ್ನು ನಿಲ್ಲಿಸುವುದಿಲ್ಲ’ ಎಂದು ವಿದ್ಯಾರ್ಥಿಗಳು ದೂರುತ್ತಾರೆ.

ಬೇಲೂರು, ಸಕಲೇಶಪು ತಾಲ್ಲೂಕಿನಲ್ಲಿಯೂ ಸಮಸ್ಯೆ ತಪ್ಪಿದಲ್ಲ. ವಿದ್ಯಾರ್ಥಿಗಳು ಬಸ್‌ ನಿಲ್ದಾಣದ ಅಧಿಕಾರಿಯನ್ನು
ಪ್ರಶ್ನಿಸಿದರೆ, ‘ಚಿಕ್ಕಮಗಳೂರು ಡಿಪೋ ಅಧಿಕಾರಿಗಳನ್ನು ಕೇಳಿ’ ಎಂದು ಹೇಳಿ ಕಳುಹಿಸುತ್ತಾರೆ.

‘ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಈ ಮಾರ್ಗದಲ್ಲಿ ಬಸ್‌ಗಳ ಓಡಾಟಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದುಅರಸೀಕೆರೆಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕಕುಮಾರ್‌ ತಿಳಿಸಿದರು.

‘ಬಸ್‌ ಸೌಲಭ್ಯ ಇಲ್ಲದ ಕಾರಣ ಸಾರ್ವಜನಿಕರು ಸೇರಿದಂತೆ ವಿದ್ಯಾರ್ಥಿಗಳಿಗೆ ತೊಂದರೆ ಯಾಗಿದೆ.
ಈಗಾಗಲೇ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಲಿದೆ’ ಎಂದು
ಪ್ರಯಾಣಿಕಮಧು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.