ADVERTISEMENT

‘ಹೆಚ್ಚುವರಿ 2 ಲಕ್ಷ ಟನ್ ರಾಗಿ ಖರೀದಿಸಿ’- ಎಚ್.ಡಿ.ರೇವಣ್ಣ

ಖರೀದಿ ಕೇಂದ್ರ ಇನ್ನಷ್ಟು ದಿನ ಮುಂದುವರಿಸಿ: ಎಚ್.ಡಿ.ರೇವಣ್ಣ ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2022, 14:47 IST
Last Updated 28 ಏಪ್ರಿಲ್ 2022, 14:47 IST
ಎಚ್.ಡಿ.ರೇವಣ್ಣ
ಎಚ್.ಡಿ.ರೇವಣ್ಣ   

ಹಾಸನ: ‘ಬೆಂಬಲ ಬೆಲೆಯಡಿ ರಾಗಿ ಖರೀದಿ ಕೇಂದ್ರಗಳನ್ನು ಇನ್ನಷ್ಟು ದಿನಮುಂದುವರಿಸಬೇಕು ಮತ್ತು ಹೆಚ್ಚುವರಿಯಾಗಿ 2 ಲಕ್ಷ ಟನ್ ರಾಗಿ ಖರೀದಿಸಬೇಕು’ ಎಂದು ಶಾಸಕ ಎಚ್.ಡಿ.ರೇವಣ್ಣ ಸರ್ಕಾರವನ್ನು ಒತ್ತಾಯಿಸಿದರು.

‘ಸರ್ವರ್ ಸಮಸ್ಯೆ ಕಾರಣಕ್ಕೆ ಮೂರು ದಿನಗಳಿಂದಲೂ ಸರಿಯಾಗಿ ರಾಗಿ ಖರೀದಿ ಕೇಂದ್ರ ಕಾರ್ಯನಿರ್ವಹಿಸದೇ ರೈತರಿಗೆ ಅನ್ಯಾಯವಾಗಿದೆ. ಹಾಗಾಗಿ ಇನ್ನಷ್ಟು ದಿನ ಖರೀದಿ ಪ್ರಕ್ರಿಯೆ ಮುಂದುವರಿಸಲು ಆದೇಶ ನೀಡಬೇಕು. ಸರ್ಕಾರ 1.14 ಲಕ್ಷ ಟನ್ ರಾಗಿ ಖರೀದಿಗೆ ಮಿತಿಗೊಳಿಸಿದೆ. ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡರ ಹೋರಾಟದ ಫಲವಾಗಿ ಮತ್ತೊಂದು ಬಾರಿಗೆ ರಾಗಿ ಖರೀದಿ ಮಾಡಲು ಅವಕಾಶ ನೀಡಲಾಗಿತ್ತು. ಆದರೆ, ಸರ್ವರ್ ಸಮಸ್ಯೆ ಮುಂದಿಟ್ಟು ಕೆಲವು ಕಡೆ ಖರೀದಿ ಮಾಡಲಾಗಿದೆ. ಉಳಿದ ಕಡೆ ಸ್ಥಗಿತಗೊಳಿಸಲಾಗಿದೆ’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಹಾಸನ ಬಸ್ ನಿಲ್ದಾಣ ಶುರು ಮಾಡಿದ್ದು ನಾನು. ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಮಾಡಲಿಲ್ಲ. ಬಸ್ ನಿಲ್ದಾಣಕ್ಕೆ ಆರ್.ಅಶೋಕ್ ಮಂಜೂರಾತಿ ನೀಡಿದ್ದರೆ ರಾಜೀನಾಮೆ ನೀಡುವೆ’ ಎಂದು ಸವಾಲು ಹಾಕಿದರು.

ADVERTISEMENT

ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬಸಚಿವ ಗೋಪಾಲಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರನ್ನು ಹಳೇ ಮೈಸೂರು ಭಾಗದ 14 ವಿಧಾನಸಭಾ ಕ್ಷೇತ್ರಗಳಿಗೆ ಉಸ್ತುವಾರಿಯನ್ನಾಗಿ ಮಾಡಲಿ’ ಎಂದುಲೇವಡಿ ಮಾಡಿದರು.

‘ಈಗ ಕಾಫಿ ಬೆಳೆಗಾರರ ಸಮಸ್ಯೆ ಬಗೆಹರಿಸಲು ಹೊರಟಿರುವ ಬಿಜೆಪಿ,ಹಿಂದಿನಿಂದ ಏಕೆ ಸಾಲಮನ್ನಾ ಮಾಡಲಿಲ್ಲ’ ಎಂದು ಪ್ರಶ್ನಿಸಿದ ಅವರು, ‘ಹಿಂದೆ ದೇವೇಗೌಡರು ಏನು ಮಾಡಿದ್ದಾರೆ ಎಂಬುದನ್ನು ಕಡತ ತೆಗೆದು ನೋಡಲಿ’ ಎಂದು ಕಂದಾಯ ಸಚಿವ ಆರ್. ಅಶೋಕ್‍ ಅವರಿಗೆ ಟಾಂಗ್ ನೀಡಿದರು.

‘ಎಚ್‍ಆರ್‌ಪಿ ಹಗರಣ ಸಚಿವರ ಬಳಿ ಹೋಗುವಂತೆ ಮಾಡಿದ್ದು ನಾನು. ಅಕ್ರಮ ನಡೆದಿರುವ ಎಲ್ಲವನ್ನೂ ರದ್ದು ಮಾಡಲಿ’ ಎಂದು ಒತ್ತಾಯಿಸಿದ ಅವರು, ‘ಸೋಲುವ ಭಯದಿಂದ ಜಿ.ಪಂ, ತಾ.ಪಂ ಚುನಾವಣೆ ಮಾಡಿಲ್ಲ’ ಎಂದು ಸರ್ಕಾರದನಡೆಯನ್ನು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.