ADVERTISEMENT

ಕೊಣನೂರು | ನಿರಂತರ ಮಳೆ: ರೈತರ ಮುಖದಲ್ಲಿ ಸಂತಸ

ಕೃಷಿ ಚಟುವಟಿಕೆಗಳಿಗೆ ಉತ್ತಮ ವಾತಾವರಣ: ಹೊಗೆಸೊಪ್ಪು ಸಸಿಗಳು ಸಮೃದ್ಧ

​ಪ್ರಜಾವಾಣಿ ವಾರ್ತೆ
Published 25 ಮೇ 2025, 6:05 IST
Last Updated 25 ಮೇ 2025, 6:05 IST
ಕೊಣನೂರು ಹೋಬಳಿಯ ವ್ಯಾಪ್ತಿಯಲ್ಲಿ ರೈತ ಮಹಿಳೆಯರು ಹೊಗೆಸೊಪ್ಪು ಗಿಡಗಳಿಗೆ ಮೂಲಗೊಬ್ಬರ ಹಾಕಿ, ಬುಡಕ್ಕೆ ಮಣ್ಣು ಒದಗಿಸಿದರು
ಕೊಣನೂರು ಹೋಬಳಿಯ ವ್ಯಾಪ್ತಿಯಲ್ಲಿ ರೈತ ಮಹಿಳೆಯರು ಹೊಗೆಸೊಪ್ಪು ಗಿಡಗಳಿಗೆ ಮೂಲಗೊಬ್ಬರ ಹಾಕಿ, ಬುಡಕ್ಕೆ ಮಣ್ಣು ಒದಗಿಸಿದರು   

ಕೊಣನೂರು: ಕೆಲ ದಿನಗಳಿಂದ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ.

ಕೊಣನೂರು ಮತ್ತು ರಾಮನಾಥಪುರ ಹೋಬಳಿಗಳ ವ್ಯಾಪ್ತಿಯಲ್ಲಿ ಮೇ ಎರಡನೇ ವಾರದವರೆಗೂ ಸತಾಯಿಸಿದ ಮಳೆ, ನಂತರ ಉತ್ತಮವಾಗಿ ಸುರಿಯುತ್ತಿದ್ದು, ರೈತರು ಬಿಡುವಿಲ್ಲದಂತೆ ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾಗಿದ್ದಾರೆ.

ವಾರದಿಂದ ಹದವಾಗಿ ಮಳೆ ಸುರಿಯುವ ಜೊತೆಗೆ ಮೋಡ ಕವಿದ ವಾತಾವರಣ ಮುಂದುವರಿದಿರುವುದು ರೈತರಿಗೆ ಸಂತಸ ತಂದಿದೆ. ಪ್ರಮುಖ ಆರ್ಥಿಕ ಬೆಳೆ ತಂಬಾಕಿನ ಸಂಪೂರ್ಣ ನಾಟಿ ಮುಗಿಸಿ, ಗಿಡಗಳಿಗೆ ಗೊಬ್ಬರ ಒದಗಿಸಿ, ಗಿಡಗಳಿಗೆ ನೇಗಿಲು ಹೊಡೆದು, ಬುಡಕ್ಕೆ ಮಣ್ಣು ಒದಗಿಸಿ, ಕಳೆ ತೆಗೆಯುವ ಕೆಲಸ ನಿರಂತರವಾಗಿ ಸಾಗಿದೆ. ಮಳೆಗೆ ಮುಂಚೆಯೇ ನೀರು ಹಾಯಿಸಿಕೊಂಡು ನಾಟಿ ಮಾಡಿದ್ದ ಹೊಗೆಸೊಪ್ಪು ಗಿಡಗಳು ಈಗ ಹುಲುಸಾಗಿ ಬೆಳೆಯುತ್ತಿವೆ.

ADVERTISEMENT

ಮೆಕ್ಕಜೋಳ ಬಿತ್ತಲು ಮಳೆಗಾಗಿ ಕಾಯುತ್ತಿದ್ದ ರೈತರು, ನಿರಾಂತಕವಾಗಿ ಬಿತ್ತನೆ ಮಾಡುತ್ತಿದ್ದಾರೆ. ಅಡಿಕೆ, ತೆಂಗು ತೋಟಗಳು ಮಳೆಯಿಂದಾಗಿ ಸಮೃದ್ಧವಾಗಿವೆ. ನೆಲಗಡಲೆ, ದ್ವಿದಳ ಧಾನ್ಯಗಳ ಬಿತ್ತನೆಯು ಸಾಗಿದ್ದು, ಬೇಸಿಗೆಯ ಧಗೆಯಿಂದ ಬಸವಳಿದಿದ್ದ ಶುಂಠಿ ಬೆಳೆಯೂ ಚೇತರಿಸಿಕೊಂಡಿದೆ. 

2025-26 ನೇ ಬೆಳೆ ಸಾಲಿನಲ್ಲಿ ಎಫ್‌ಸಿವಿ ತಂಬಾಕು ಬೆಳೆಯಲ್ಲಿ ರಸಗೊಬ್ಬರ ಬಳಕೆ ಮತ್ತು ನಿರ್ವಹಣೆಗೆ ಹುಣಸೂರಿನ ರಾಷ್ಟ್ರೀಯ ಸಂಶೋಧನೆ ಮತ್ತು ವಾಣಿಜ್ಯ ಕೃಷಿ ಸಂಸ್ಥೆ ಪ್ರಕಟಣೆ ಹೊರಡಿಸಿದ್ದು, ಸಾರಜನ, ರಂಜಕ ಮತ್ತು ಪೊಟ್ಯಾಷ್ ಪೋಷಕಾಂಶವನ್ನು 60:40:120 ರ ಅನುಪಾತದಲ್ಲಿ ಬೆಳೆಸಲು ಶಿಫಾರಸು ಮಾಡಿದೆ.

ಪ್ರತಿ ಎಕರೆಯಲ್ಲಿ ಹೊಗೆಸೊಪ್ಪು ಸಸಿಗಳನ್ನು ನಾಟಿ ಮಾಡಿದ 10ರಿಂದ 12 ದಿನಗಳ ನಂತರ ಮೂಲ ಗೊಬ್ಬರವಾಗಿ 32 ಕೆ.ಜಿ. ಡೈಆಮೋನಿಯಂ ಪಾಸ್ಫೇಟ್, 32 ಕೆ.ಜಿ ಅಮೋನಿಯಂ ಸಲ್ಪೇಟ್, 48 ಕೆ.ಜಿ. ಸಲ್ಪೇಟ್ ಆಫ್ ಪೊಟ್ಯಾಶ್, 104.4 ಕೆ.ಜಿ. ಬೋರೋನೇಟಡ್ ಪೊಟ್ಯಾಷಿಯಂ ಸಿಯೋನೈಟ್ (ಎಸ್‌ಒಪಿಗೆ ಪರ್ಯಾಯ) ನೀಡಬೇಕು.

ನಾಟಿ ಮಾಡಿದ 25 ದಿನಗಳ ನಂತರ ಪ್ರತಿ ಎಕರೆಯಲ್ಲಿ ಹೊಗೆಸೊಪ್ಪು ಬೆಳೆಸಲು ಮೇಲುಗೊಬ್ಬರವಾಗಿ 60 ಕೆ.ಜಿ. ಅಮೋನಿಯಂ ಸಲ್ಪೇಟ್, 48 ಕೆ.ಜಿ. ಸಲ್ಪೇಟ್ ಆಫ್ ಪೊಟ್ಯಾಷ್ ಮತ್ತು 104.4 ಕೆ..ಜಿ ಬೋರೋನೇಟಡ್ ಪೊಟ್ಯಾಷಿಯಂ ಸಿಯೋನೈಟ್ ಬಳಸಬೇಕು ಎಂದು ತಿಳಿಸಿದೆ.

ಹೊಗೆಸೊಪ್ಪು ನಾಟಿಗೆ ಉತ್ತಮ ವಾತಾವರಣ ಇದೆ. ತಂಬಾಕು ಮಂಡಳಿಯಿಂದ ರಸಗೊಬ್ಬರ ವಿತರಿಸಲಾಗುತ್ತಿದೆ. ಗೊಬ್ಬರವನ್ನು ನಿಯಮಕ್ಕೆ ತಕ್ಕಂತೆ ಬಳಸಿದಲ್ಲಿ ಉತ್ತಮ ಗುಣಮಟ್ಟದ ತಂಬಾಕು ಉತ್ಪಾದಿಸಲು ಸಾಧ್ಯವಿದೆ ಸವಿತಾ.
ರಾಮನಾಥಪುರ, ತಂಬಾಕು ಮಾರುಕಟ್ಟೆ ಅಧೀಕ್ಷಕಿ
ಹಗುರವಾಗಿ ಮಳೆ ಸುರಿಯುತ್ತಿರುವುದರಿಂದ ಹೊಗೆಸೊಪ್ಪು ಮಾತ್ರವಲ್ಲದೇ ಎಲ್ಲ ಬೆಳೆಗಳಿಗೂ ಸಹಕಾರಿಯಾಗಿದೆ. ಮುಂದೆ ನಿತ್ಯ ಮಳೆ ಸುರಿದಲ್ಲಿ ಶೀತದ ವಾತಾವರಣ ಹೊಗೆಸೊಪ್ಪು ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.
ನಾಗೇಗೌಡ ಚಿಕ್ಕಹಳ್ಳಿ. ತಂಬಾಕು ಬೆಳೆಗಾರ
ಗೆಣಸು ಬಳ್ಳಿ ನೆಟ್ಟ ರೈತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.