ADVERTISEMENT

‘ಬೆಲೆ ಏರಿಕೆ: ಜನತೆ ಜತೆ ಬಿಜೆಪಿ ಚೆಲ್ಲಾಟ’

ಕಾಂಗ್ರೆಸ್ ಸೇರುವವರ ಹೆಸರು ಬಹಿರಂಗ ಪಡಿಸಲ್ಲ: ಡಿಕೆಶಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 15:34 IST
Last Updated 6 ಏಪ್ರಿಲ್ 2022, 15:34 IST
ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್   

ಹಾಸನ: ‘ಬಿಜೆಪಿ, ಜೆಡಿಎಸ್‌ ಪಕ್ಷಗಳ ಕೆಲ ಶಾಸಕರು ಕಾಂಗ್ರೆಸ್ ಸೇರಲು ಅರ್ಜಿಹಾಕುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸ್ಥಳೀಯರ ಅಭಿಪ್ರಾಯ, ಒಪ್ಪಿಗೆಪಡೆದು ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್ ತಿಳಿಸಿದರು.

‘ಅಲ್ಲಂ ವೀರಭದ್ರಪ್ಪ ನೇತೃತ್ವದ ಸಮಿತಿಗೆ ಎಲ್ಲಾ ಪಕ್ಷಗಳಿಂದ ಅರ್ಜಿಗಳುಬಂದಿವೆ. ಅದರಲ್ಲೂ ಹಾಸನದಿಂದ ಬಂದಿರುವ ಅರ್ಜಿಗಳ ಬಗ್ಗೆ ಗೌಪ್ಯತೆಕಾಪಾಡಬೇಕಾಗುತ್ತದೆ. ಶಾಸಕರೇ ಬೇಕು ಅಂತ ಇಲ್ಲ. ಕಾರ್ಯಕರ್ತರು ಬೇಕು. ದೊಡ್ಡ ಲೀಡರ್‌ಗೆ ಕಾಯ್ದುಕೊಂಡು ಕುಳಿತಿಲ್ಲ. ಮತದಾರರಕುಟುಂಬಗಳು ಬಂದರೆ ಅದೇ ದೊಡ್ಡ ಶಕ್ತಿ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿಹೇಳಿದರು.

‘ರಾಜ್ಯದಲ್ಲಿ 63 ಲಕ್ಷ ಡಿಜಿಟಲ್ ಸದಸ್ಯತ್ವ ನೋಂದಣಿ ಮಾಡಲಾಗಿದೆ. ಹಾಸನ ಜಿಲ್ಲೆಯಲ್ಲಿ 2.35 ಲಕ್ಷ ಮಂದಿ ಸದಸ್ಯತ್ವ ಪಡೆದಿದ್ದಾರೆ. ಬಿಜೆಪಿ, ಜೆಡಿಎಸ್‌ ಮುಖಂಡರು, ಕಾರ್ಯಕರ್ತರೂ ಕಾಂಗ್ರೆಸ್ ಪಕ್ಷದ ಸದಸ್ಯತ್ವ ತೆಗೆದುಕೊಳ್ಳುತ್ತಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ’ ಎಂದರು. ‌

ADVERTISEMENT

‘ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ವಿಶ್ವನಾಥ್, ಕೆಂಪಣ್ಣ ಹೇಳಿದ್ದಾರೆ. ಬೆಲೆಏರಿಕೆಗೆ ಕಡಿವಾಣ ಹಾಕದೆ ಜನರ ಜೊತೆ ಬಿಜೆಪಿ ಚೆಲ್ಲಾಟ ಆಡುತ್ತಿದೆ ಎಂದು ಕಿಡಿಕಾರಿದ ಶಿವಕುಮಾರ್‌, ಇದು ಜನರಿಗೂ ಅರ್ಥವಾಗಿದ್ದು, ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ’ ಎಂದರು.

ಗೊಬ್ಬರದ ಬೆಲೆ ಜಾಸ್ತಿಯಾಗಿದೆ, ರೈತರ ಆದಾಯ ದುಪ್ಪಟ್ಟು ಮಾಡಲಿಲ್ಲ. ಭತ್ತ, ರಾಗಿ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿಲ್ಲ. ಇದನ್ನು ಬಿಟ್ಟು ಬಿಜೆಪಿಯವರು ಪ್ರತಿ ಜಿಲ್ಲೆಯಲ್ಲಿ ಕೋಮುಗಲಭೆ ವಾತಾವರಣ ನಿರ್ಮಾಣವಾಗುತ್ತಿದೆ. ಶಾಂತಿಪ್ರಿಯ ರಾಜ್ಯದಲ್ಲಿ ಪರಿಸ್ಥಿತಿ ವಿಷಮಿಸುತ್ತಿದೆ. ಬಂಡವಾಳ ಹೂಡಲು ಯಾರೂ ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಕಾಂಗ್ರೆಸ್ ಸರ್ಕಾರ ರಚಿಸಲಿದೆ. ರಾಜ್ಯದಾದ್ಯಂತ ಪ್ರವಾಸ ಕೈಗೊಂಡಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಾಳೆಯೇ ಚುನಾವಣೆ ನಡೆದರೂ ಎದುರಿಸಲು ಸಿದ್ಧ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಚುನಾವಣೆಗೆ ಮುನ್ನವೇ ಅಭ್ಯರ್ಥಿ ಘೋಷಣೆ ಮಾಡುವ ಕುರಿತು ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಜತೆ ಚರ್ಚಿಸಲಾಗಿದೆ. ಈ ಸಂಬಂಧ ಜಿಲ್ಲಾ ನಾಯಕರ ಜತೆ ಚರ್ಚಿಸಿ, ಮಾಹಿತಿ ಪಡೆಯಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದ ವರದಿಯೂ ಇದೆ’ ಎಂದರು.

ಸಿದ್ದರಾಮಯ್ಯ ಅವರ ಕಾಲದಲ್ಲಿ ಶಾದಿಭಾಗ್ಯ ತಂದು ಒಂದು ಸಮುದಾಯ ಓಲೈಸಿ ಸಮಾಜ ಒಡೆದರು ಎಂಬ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆರೋಪಕ್ಕೆ ಪ್ರತಿಕ್ರಿಯಿಸಿದ ಡಿಕೆಶಿ, 'ಅವರಿಗೆ ಉತ್ತರ ಕೊಡುವಷ್ಟು ದೊಡ್ಡವನಲ್ಲ. ಅವರು ಮೇಧಾವಿಗಳು. ನಾವು ನಮ್ಮ ಕಾರ್ಯಕ್ರಮ ರೂಪಿಸಿದ್ದೇವೆ. ಅವರು ಜನರಿಗೆ ಉಪಯೋಗವಾಗುವ ಕಾರ್ಯಕ್ರಮ ಮಾಡಲಿ. ಅದನ್ನು ಜನರಿಗೆ ತಲುಪಿಸಿ ನಂತರ ಮಾತನಾಡಲಿ' ಎಂದು ಉತ್ತರಿಸಿದರು.

ಗೋಷ್ಠಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಜಿಲ್ಲಾ ಘಟಕದ ಅಧ್ಯಕ್ಷ ಜಾವಗಲ್ ಮಂಜುನಾಥ್, ಮುಖಂಡರಾದ ಎಚ್.ಕೆ.ಜವರೇಗೌಡ, ಬಿ.ಶಿವರಾಂ, ಎಂ.ಎ.ಗೋಪಾಲಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.