ಕೊಣನೂರು: ಸಾಲದ ಹೊರೆಯಿಂದ ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡ ರೈತ ಮಂಜೇಗೌಡ ಅವರ ನಿವಾಸಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಸಾಂತ್ವನ ಹೇಳಿದರು.
ರಾಮನಾಥಪುರ ಹೋಬಳಿಯ ಮಲ್ಲಾಪುರದ ಮಂಜೇಗೌಡ ಗುರುವಾರ ರಾತ್ರಿ ವಿಷಕುಡಿದು ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಶನಿವಾರ ಮೃತಪಟ್ಟಿದ್ದರು.
ಬ್ಯಾಂಕ್‌ನಲ್ಲಿ ₹5 ಲಕ್ಷ ಸಾಲ ಪಡೆದಿದ್ದು, ಶುಂಠಿ ಬೆಳೆಯಲ್ಲಿ ಆದಾಯ ಬಾರದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರಿಗೆ ಇಬ್ಬರು ಪುತ್ರಿಯರು, ಪತ್ನಿ ಮತ್ತು ಪುತ್ರ ಇದ್ದಾರೆ.
ಜಿಲ್ಲಾಧಿಕಾರಿ ಲತಾಕುಮಾರಿ ಮಾತನಾಡಿ, ‘ಮೃತರ ಕುಟುಂಬದವರಿಗೆ ₹5 ಲಕ್ಷ ಪರಿಹಾರವನ್ನು ಒಂದು ವಾರದೊಳಗೆ ಹಾಗೂ ರೈತ ಆತ್ಮಹತ್ಯೆಯ ಪಿಂಚಣಿ ಯೋಜನೆ ಮಾಸಿಕ ₹2 ಸಾವಿರ, ರಾಷ್ಟ್ರೀಯ ಕುಟುಂಬ ನೆರವು ಯೋಜನೆಯ ಪರಿಹಾರಗಳನ್ನು ನಾಳೆಯೊಳಗೆ ವಿತರಿಸಿ’ ಎಂದು ತಹಶೀಲ್ದಾರ್ ಕೆ.ಸಿ.ಸೌಮ್ಯ ಅವರಿಗೆ ಸೂಚಿಸಿದರು.
ರಾಷ್ಟ್ರೀಯ ಪ್ರಕೃತಿ ವಿಕೋಪ ಯೋಜನೆಯಡಿ ಮನೆ ಹಾಗೂ ಪಶು ಇಲಾಖೆಯಿಂದ ಪಶುಭಾಗ್ಯ ಹಾಗೂ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೀಡಬೇಕು’ ಎಂದು ಸೂಚಿಸಿದರು.
ಸಕಲೇಶಪುರ ಉಪ ವಿಭಾಗಾಧಿಕಾರಿ ಶ್ರುತಿ ಮಾತನಾಡಿ, ‘ಮೃತರ ಕುಟುಂಬಕ್ಕೆ ಸರ್ಕಾರದ ಸವಲತ್ತು ಕೊಡಿಸಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ಪರಿಹಾರವನ್ನು ತುರ್ತಾಗಿ ನೀಡಲಾಗುವುದು ಎಂದು ತಿಳಿಸಿದರು.
ಗ್ರೇಡ್ 2 ತಹಶೀಲ್ದಾರ್ ಸಿ. ಸ್ವಾಮಿ, ಕಂದಾಯ ನಿರೀಕ್ಷಕ ಭಾಸ್ಕರ್, ಗ್ರಾಮ ಆಡಳಿತ ಅಧಿಕಾರಿ ಪ್ರದೀಪ್ ಕಾಂಬಳೆ, ಕಿರಣ್, ಮಧು ಕುಮಾರ್, ತಾಲ್ಲೂಕು ಕಚೇರಿಯ ವಿಷಯ ನಿರ್ವಾಹಕ ಉಜ್ವಲ್‌ಕುಮಾರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.