ADVERTISEMENT

ಕೋಡಿ ಬಿದ್ದ ಕಲ್ಗುಂಡಿ ಕೆರೆ: ರಸ್ತೆ ಹಾಳು

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 2:58 IST
Last Updated 26 ಅಕ್ಟೋಬರ್ 2021, 2:58 IST
ಅರಸೀಕೆರೆ ತಾಲ್ಲೂಕಿನ ಕಲ್ಗುಂಡಿ ಗ್ರಾಮದ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು ಸ್ಥಳಕ್ಕೆ ಶಾಸಕ ಕೆ. ಎಂ. ಶಿವಲಿಂಗೇಗೌಡ ಹಾಗೂ ತಹಶೀಲ್ದಾರ್ ಸಂತೋಷ್ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ನಟರಾಜ್ ಭೇಟಿ ನೀಡಿ ಪರಿಶೀಲಿಸಿದರು. ಜೆಡಿಎಸ್ ಮುಖಂಡ ಸುರೇಶ್ ರಾಂಪುರ ಇದ್ದರು
ಅರಸೀಕೆರೆ ತಾಲ್ಲೂಕಿನ ಕಲ್ಗುಂಡಿ ಗ್ರಾಮದ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು ಸ್ಥಳಕ್ಕೆ ಶಾಸಕ ಕೆ. ಎಂ. ಶಿವಲಿಂಗೇಗೌಡ ಹಾಗೂ ತಹಶೀಲ್ದಾರ್ ಸಂತೋಷ್ ಕುಮಾರ್, ತಾಲ್ಲೂಕು ಪಂಚಾಯಿತಿ ಇಒ ನಟರಾಜ್ ಭೇಟಿ ನೀಡಿ ಪರಿಶೀಲಿಸಿದರು. ಜೆಡಿಎಸ್ ಮುಖಂಡ ಸುರೇಶ್ ರಾಂಪುರ ಇದ್ದರು   

ಅರಸೀಕೆರೆ: ತಾಲ್ಲೂಕಿನಲ್ಲಿ ಸುರಿದ ಭಾರಿ ಮಳೆಗೆ ಕೆಲವೆಡೆ ಕೆರೆಗಳಿಗೆ ನೀರು ಹರಿದುಬಂದರೆ ಇನ್ನೂ ಕೆಲವೆಡೆ ಸಣ್ಣಪುಟ್ಟ ಕೆರೆ ಕಟ್ಟೆಗಳು ತುಂಬಿ ಕೋಡಿ ಹರಿಯುತ್ತಿದ್ದು ರಸ್ತೆಗಳ ಮೇಲೆ ನೀರು ಹರಿದು ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಆಗಿದೆ.

ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಕಲ್ಗುಂಡಿ ಗ್ರಾಮದ ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ನೀರು ರಸ್ತೆ ಮೇಲೆ ಹರಿಯುತ್ತಿರುವುದರಿಂದ ರಸ್ತೆ ಹಾಳಾಗಿದೆ ಎಂಬ ಸ್ಥಳೀಯರ ಮಾಹಿತಿ ನೀಡಿದ್ದಕ್ಕೆ ಸ್ಥಳಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ ಭೇಟಿ ನೀಡಿ ಪರಿಶೀಲಿಸಿದರು.

‘ಇತ್ತೀಚೆಗೆ ಎಲ್ಲೆಡೆ ಉತ್ತಮ ಮಳೆಯಾಗುತ್ತಿದೆ, ನಮ್ಮ ತಾಲ್ಲೂಕಿನಲ್ಲೂ ಮಳೆಯಿಂದಾಗಿ ಕೆರೆ ಕಟ್ಟೆಗಳು ತುಂಬಿ ಕೋಡಿ ಬಿದ್ದ ಪರಿಣಾಮ ನೀರು ರಸ್ತೆ ಮೇಲೆ ಹರಿಯುತ್ತಿದೆ, ಈ ನಿಟ್ಟಿನಲ್ಲಿ ರಸ್ತೆಯನ್ನು ಎತ್ತರಿಸಲು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಟೇಶ್ ಅವರಿಗೆ ಸೂಚಿಸಲಾಗಿದೆ’ ಎಂದು ಶಿವಲಿಂಗೇಗೌಡ ಹೇಳಿದರು.

ADVERTISEMENT

ನಮ್ಮ ತಾಲ್ಲೂಕು ಬರಪೀಡಿತ ಪ್ರದೇಶವಾಗಿರುವುದರಿಂದ ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡುವುದು ಬಹುಮುಖ್ಯ. ಈ ನಿಟ್ಟಿನಲ್ಲಿ ಈಗಾಗಲೇ ತಾಲ್ಲೂಕಿನೆಲ್ಲೆಡೆ ಚೆಕ್ ಡ್ಯಾಂಗಳು, ಕೃಷಿ ಹೊಂಡಗಳನ್ನು ನಿರ್ಮಿಸಲಾಗಿದೆ. ನೀರು ಸಂಗ್ರಹಕ್ಕೆ ಎಲ್ಲರೂ ಮುಂದಾಗಬೇಕು, ಉತ್ತಮ ಮಳೆಯಿಂದಾಗಿ ಕೆಲವು ಕೆರೆ ಕಟ್ಟೆಗಳಿಗೆ ನೀರು ಬಂದಿದ್ದು ನನಗೆ ಸಂತಸ ತಂದಿದೆ. ಕೃಷಿ ಅಭಿವೃದ್ಧಿಗೆ ಸಹಕಾರಿಯಾಗಲಿದ್ದು, ಕೊರೊನಾದಿಂದ ಆರ್ಥಿಕವಾಗಿ ಕಂಗಾಲಾಗಿರುವ ರೈತರು ತೆಂಗು ಬೆಳೆ ಚೇತರಿಸಿಕೊಳ್ಳುವ ನಿರೀಕ್ಷೆಯಲ್ಲಿ ಖುಷಿಯಾಗಿದ್ದಾರೆ’ ಎಂದರು.

ತಹಶೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ‘ತಾಲ್ಲೂಕಿನ ಕಣಕಟ್ಟೆ ಹೋಬಳಿಯ ಕಲ್ಗುಂಡಿ ಹಾಗೂ ಕರಡಿಹಳ್ಳಿ ಭೋವಿ ಕಾಲೊನಿಯಲ್ಲಿ ಕೆರೆಗಳು ತುಂಬಿ ಕೋಡಿ ಬಿದ್ದಿದೆ. ಈ ನಿಟ್ಟಿನಲ್ಲಿ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ, ಸಾರ್ವಜನಿಕರಿಗೆ ಓಡಾಡಲು ತೊಂದರೆಯಾಗದಂತೆ ನಿಗಾ ವಹಿಸಲಾಗಿದೆ, ಜತೆಗೆ ವಾಲೇಹಳ್ಳಿ, ನಾಗಸುಮುದ್ರ ಕೆರೆಗಳಿಗೂ ಅಲ್ಪ ಪ್ರಮಾಣದ ನೀರು ಹರಿದು ಬರುತ್ತಿದೆ’ ಎಂದರು.

ತಾಲ್ಲೂಕು ಪಂಚಾಯಿತಿ ಇಒ ನಟರಾಜ್, ಜೆಡಿಎಸ್ ಮುಖಂಡರಾದ ಸುರೇಶ್ ರಾಂಪುರ, ಗ್ರಾಮಸ್ಥರು ಸೇರಿದಂತೆ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.