ADVERTISEMENT

ಕೋವಿಡ್‌ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ವಿಫಲ

ಹೆಚ್ಚುತ್ತಿರುವ ಸಾವು, ನೋವು: ಕಾಂಗ್ರೆಸ್‌ ಮುಖಂಡ ಬಿ.ಪಿ. ಮಂಜೇಗೌಡ ಆರೋಪ

​ಪ್ರಜಾವಾಣಿ ವಾರ್ತೆ
Published 18 ಮೇ 2021, 12:15 IST
Last Updated 18 ಮೇ 2021, 12:15 IST
ಬಿ.ಪಿ. ಮಂಜೇಗೌಡ
ಬಿ.ಪಿ. ಮಂಜೇಗೌಡ   

ಹಾಸನ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವು, ನೋವು ತಡೆಯುವಲ್ಲಿ
ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ಮುಖಂಡ ಬಿ.ಪಿ. ಮಂಜೇಗೌಡ ಆರೋಪಿಸಿದ್ದಾರೆ.

ನಗರ ಸೇರಿದಂತೆ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಅಮ್ಲಜನಕ ಕೊರತೆ ಉಂಟಾಗಿದೆ. ಹಿಮ್ಸ್ ಕೋವಿಡ್‌ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ನಿತ್ಯ 20 ರಿಂದ 30 ಸೋಂಕಿತರು ಮೃತಪಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ಸೋಂಕಿತರ ಸಂಖ್ಯೆ ದಿನಕ್ಕೆ ಎರಡು‌ ಸಾವಿರ ಗಡಿ ದಾಟುತ್ತಿದೆ. ಇದು ಮೇಲ್ನೋಟಕ್ಕೆ ಕಂಡು ಬಂದರೂ
ಇನ್ನು‌ ಹೆಚ್ಚು ‌ಜನರು‌ ಸೋಂಕಿನಿಂದ ಬಳಲುತ್ತಿದ್ದಾರೆ. ‌ಸಾವಿನ ಪ್ರಮಾಣವೂ‌ ಹೆಚ್ಚುತ್ತಿದೆ. ಆದರೆ,
ಜಿಲ್ಲಾಡಳಿತ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ‌ ನಿಖರ ಮಾಹಿತಿ ನೀಡುತ್ತಿಲ್ಲ. ಸುಳ್ಳು‌ ಹಾಗೂ ತಪ್ಪು ‌ಮಾಹಿತಿಯನ್ನು ನೀಡುತ್ತಿದೆ ಎಂದು ದೂರಿದರು.

ADVERTISEMENT

ಆಮ್ಲಜನಕ ‌ಸಮಸ್ಯೆ‌ ಬಗ್ಗೆ‌ ಯಾರು ಮಾತನಾಡುತ್ತಿಲ್ಲ. ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ
ಜಿಲ್ಲಾಧಿಕಾರಿ ‌ಆರ್.ಗಿರೀಶ್ ಆಮ್ಲಜನಕ ಕೊರತೆ‌ ಇಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಈಗಾಗಲೇ ಹಲವು
ಸೋಂಕಿತರ ಕುಟುಂಬದವರು ಆಮ್ಲಜನಕ ಕೊರತೆ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

ಆಮ್ಲಜನಕ ಸಮಪರ್ಕವಾಗಿ ಪೂರೈಸುವ ಕಡೆ ರಾಜ್ಯ ಸರ್ಕಾರ ಗಮನ ಹರಿಸಬೇಕು. ಮುಖ್ಯಮಂತ್ರಿ
ಹಾಸನ ಜಿಲ್ಲೆಯತ್ತ ತುರ್ತು ಗಮನಹರಿಸಬೇಕು ಎಂದು ಆಗ್ರಹಿಸಿದರು.

ರೆಮ್‌ಡಿಸಿವಿರ್‌ ಔಷಧಿಯ ಸಮಸ್ಯೆ ಇದ್ದರೂ ಸರ್ಕಾರ ನಿಗಾ ವಹಿಸುತ್ತಿಲ್ಲ. ಕೋವಿಡ್‌ ಲಸಿಕೆ
ನೀಡುವಲ್ಲಿ ವಿಫಲವಾಗಿದೆ. ಮೊದಲ ಡೋಸ್ ಲಸಿಕೆ ತೆಗೆದುಕೊಂಡವರಿಗೆ ಎರಡನೇ‌ ಡೋಸ್‌
ದೊರೆಯದೆ ಆತಂಕಗೊಂಡಿದ್ದಾರೆ. ಸರ್ಕಾರ ಜನರ ಪ್ರಾಣ ಉಳಿಸಲು ನಿರ್ಲಕ್ಷ್ಯ ವಹಿಸಿದೆ ದೂರಿದರು.

ಮಸ್ಕಿ ಉಪ‌ ಚುನಾವಣೆ ಪ್ರಚಾರಕ್ಕೆ‌ ಹೋಗಿದ್ದ ಶಾಸಕ ಪ್ರೀತಂ ಜೆ.ಗೌಡರಿಗೂ ಸೋಂಕು ತಗುಲಿತ್ತು.
ಈಗ ಆರೋಗ್ಯ ಸುಧಾರಿಸಿಕೊಂಡಿದ್ದರೂ ಆಮ್ಲಜನಕ ಕೊಡಿಸುವತ್ತ ಗಮನಹರಿಸಲೇ ಇಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಜಿಲ್ಲೆಗೆ ಆಮ್ಲಜನಕ ನೀಡುವ
ಮೂಲಕ ‌ಜನರ ಪ್ರಾಣ ಉಳಿಸಲು ಸಹಕಾರ ನೀಡಬೇಕು ಎಂದು ಮನವಿ‌ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.