ಹೊಳೆನರಸೀಪುರ: ‘ರಾಜ್ಯದಲ್ಲಿ ನೆರೆ ಪರಿಹಾರ ಹಾಗೂ ಇತರೆ ಕಾರ್ಯಕ್ರಮಗಳಿಗೆ ಒಟ್ಟು ₹777 ಕೋಟಿ ಬಿಡುಗಡೆ ಮಾಡಲಾಗಿದೆ. ಹಾಸನ ಜಿಲ್ಲೆಗೆ ₹23 ಕೋಟಿ ನೀಡಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಶನಿವಾರ ತಿಳಿಸಿದರು.
ಪಟ್ಟಣದಲ್ಲಿ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ‘ನೆರೆ ಹಾವಳಿಗೆ ತುತ್ತಾದವರಿಗೆ ತಕ್ಷಣ ನೆರವು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದರು.
‘ಮನೆಗೆ ಭಾಗಶಃ ಹಾನಿಯಾದರೆ ₹50 ಸಾವಿರ ಕೊಡಲು ಮುಖ್ಯಮಂತ್ರಿಯೊಂದಿಗೆ ಚರ್ಚಿಸಲಾಗಿದೆ. ಪೂರ್ಣ ಹಾನಿಯಾದರೆ ₹1.25 ಲಕ್ಷ ಪರಿಹಾರದ ಜೊತೆ ಹೊಸ ಮನೆ ನೀಡುತ್ತೇವೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಂಡಿದೆ’ ಎಂದರು.
‘ರಾಜ್ಯದಲ್ಲಿ ವಾಡಿಕೆ ಪ್ರಕಾರ 41.9 ಸೆಂ.ಮೀ. ಮಳೆಯಾಗಬೇಕಿತ್ತು. ಈಗಾಗಲೇ 54 ಸೆಂ.ಮೀ.ಗಿಂತ ಹೆಚ್ಚು ಮಳೆಯಾಗಿದೆ. 600 ಮನೆಗಳು ಬಿದ್ದಿವೆ. ಸಾವುಗಳು ಸಂಭವಿಸಿವೆ. 114 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಕಾಲಕಾಲಕ್ಕೆ ಪರಿಹಾರ ನೀಡಲಾಗುತ್ತಿದೆ’ ಎಂದರು.
ಮೇಕೆದಾಟು, ಕಳಸಾ– ಬಂಡೂರಿಗೆ ಅನುಮತಿ ಕೊಡಿಸಿ: ‘ದೊಡ್ಡ ಯಜಮಾನರು, ಚಿಕ್ಕ ಯಜಮಾನರು ನಿನ್ನೆ ಪ್ರಧಾನಿಯನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಪ್ರಧಾನಿ ಕೈ ಹಿಡಿದು, ಮೇಕೆದಾಟು, ಕಳಸಾ– ಬಂಡೂರಿ ಯೋಜನೆಗೆ ಸಹಿ ಹಾಕಿಸಿದ್ದರೆ ನಾವು ಧನ್ಯವಾದ ಹೇಳಿ ಕೈ ಮುಗಿಯುತ್ತಿದ್ದೆವು’ ಎಂದು ಎಚ್.ಡಿ. ದೇವೇಗೌಡ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ಟೀಕಿಸಿದರು.
‘ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದಿಂದ ಒಬ್ಬೊಬ್ಬ ಕ್ಯಾಬಿನೆಟ್ ದರ್ಜೆ ಸಚಿವರಾಗಿದ್ದಾರೆ. ಮೇಕೆದಾಟು, ಕಳಸಾ– ಬಂಡೂರಿ ಯೋಜನೆಗೆ ಏಕೆ ಅನುಮತಿ ಕೊಡಿಸಲು ಆಗುತ್ತಿಲ್ಲ’ ಎಂದು ಪ್ರಶ್ನಿಸಿದರು.
‘ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಲಾಗಿದೆ. ಭದ್ರಾ ಮೇಲ್ದಂಡೆ ಯೋಜನೆಗೆ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಘೋಷಿಸಿರುವ ₹5 ಸಾವಿರ ಕೋಟಿಯನ್ನು ಬಿಡುಗಡೆ ಮಾಡಿಸಿ’ ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.