ಹೆತ್ತೂರು: ಜಾಗತಿಕ ವಿದ್ಯಮಾನದಲ್ಲಿ ಕಾಫಿಯ ದರದಲ್ಲಿ ಏರಿಳಿತವಾದರೆ, ಬೆಳೆಗಾರರು ಧೃತಿಗೆಡದೇ ಉತ್ತಮ ರೀತಿಯ ಕಾಫಿಯನ್ನು ಹೆಚ್ಚು ಬೆಳೆಯಲು ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು ಎಂದು ಭಾರತೀಯ ಕಾಫಿ ಮಂಡಳಿಯ ಅಧ್ಯಕ್ಷ ಎಂ.ಜೆ. ದಿನೇಶ್ ತಿಳಿಸಿದರು.
ಹೆತ್ತೂರು ಬೆಳೆಗಾರರ ಸಂಘದ ಕಚೇರಿಯಲ್ಲಿ ಶುಕ್ರವಾರ ನಡೆದ ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಭಾರತೀಯ ಕಾಫಿಯ ಗುಣಮಟ್ಟದಿಂದಾಗಿ ಪ್ರಪಂಚದಾದ್ಯಂತ ಬೇಡಿಕೆ ಬಂದಿದೆ. ಕಾಫಿ ಹೆಚ್ಚು ಬೆಳೆಯಲು ವೈಜ್ಞಾನಿಕ ಕ್ರಮ ಅನುಸರಿಸಬೇಕು. ಇದರಿಂದ ದರದಲ್ಲಿ ಏರಿಳಿತವಾದರೂ ಕೂಡ ಬೆಳೆಗಾರ ಲಾಭದಲ್ಲಿ ಇರುವಂತಾಗುತ್ತದೆ ಎಂದರು.
ಈ ನಿಟ್ಟಿನಲ್ಲಿ ಬೆಳೆಗಾರರ ಚಿಂತನೆಗಳು ಪರಿವರ್ತನೆಯಾಗಬೇಕು. ಎಫ್‌ಪಿಒ ಯೋಜನೆ ಅಡಿಯಲ್ಲಿ ರೈತರು ಉತ್ತಮ ರೀತಿಯ ಕಾಫಿಯನ್ನು ಬೆಳೆದರೆ, ಜಾಗತಿಕ ಮಟ್ಟದಲ್ಲಿ ಇನ್ನಷ್ಟು ಭಾರತದ ಕಾಫಿಗೆ ಬೇಡಿಕೆ ಬರುತ್ತದೆ. ಬೆಳೆಗಾರರು ಇಂತಹ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕು. ಎಂದರು.
ಭಾರತೀಯ ಕಾಫಿ ಮಂಡಳಿ ಸಲಹೆಗಾರ ಡಾ.ನವೀನ್ ಮಾತನಾಡಿ, ಬೆಳೆಗಾರರು ಹೊಸ ಆವಿಷ್ಕಾರದ ಚಿಂತನೆ ಮಾಡಬೇಕು. ವ್ಯಾವಹಾರಿಕವಾಗಿ ವೃತ್ತಿ ಪರ ಬೆಳೆಗಾರರಾಗಬೇಕು. ಕೇಂದ್ರ ಸರ್ಕಾರ 2020ರಲ್ಲಿ ಎಫ್‌ಪಿಒ ಯೋಜನೆ ತಂದಿದ್ದು, ಮುಂದಿನ ದಿನಗಳಲ್ಲಿ 100 ಎಫ್‌ಪಿಒ ತೆರೆಯುವ ಉದ್ದೇಶ ಹೊಂದಿದೆ ಎಂದರು.
ಹೆತ್ತೂರು ಹೋಬಳಿಯ ಬೆಳೆಗಾರರ ಸಂಘದ ಅಧ್ಯಕ್ಷ ದೇವರಾಜ್, ಯಸಳೂರು ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಬಿ. ಗಂಗಾಧರ, ಕಾಫಿ ಮಂಡಳಿ ಜಂಟಿ ನಿರ್ದೇಶಕ ನವೀನ್, ಕಾಫಿ ಮಂಡಳಿ ಉಪ ನಿರ್ದೇಶಕ ಶಕ್ತಿ, ಹಿರಿಯ ಸಂಪರ್ಕಾಧಿಕಾರಿ ಬಸವರಾಜ್, ಯಸಳೂರು, ಹೆತ್ತೂರು ಹೋಬಳಿಯ ಬೆಳೆಗಾರರ ಸಂಘದ ನಿರ್ದೇಶಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.