ADVERTISEMENT

ಮಾಜಿ ಶಾಸಕ ಪ್ರಕಾಶ್ ಗೋಮಾತೆ ಪ್ರತಿರೂಪ: ಶಂಭುನಾಥ ಸ್ವಾಮೀಜಿ

ರಾಜ್ಯಮಟ್ಟದ ಹೊನಲು– ಬೆಳಕಿನ ಫುಟ್‌ಬಾಲ್‌ ಟೂರ್ನಿ ಉದ್ಘಾಟಿಸಿದ ಶಂಭುನಾಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 14:04 IST
Last Updated 14 ಸೆಪ್ಟೆಂಬರ್ 2024, 14:04 IST
ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯನ್ನು ಶಂಭುನಾಥ ಸ್ವಾಮೀಜಿ ಉದ್ಘಾಟಿಸಿದರು
ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ರಾಜ್ಯಮಟ್ಟದ ಹೊನಲು ಬೆಳಕಿನ ಪಂದ್ಯಾವಳಿಯನ್ನು ಶಂಭುನಾಥ ಸ್ವಾಮೀಜಿ ಉದ್ಘಾಟಿಸಿದರು   

ಹಾಸನ: ‘ಸೌಮ್ಯ ಸ್ವಭಾವದ ಮೂಲಕವೇ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿ ಜನಸೇವೆಗಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದ ಮಾಜಿ ಶಾಸಕ ದಿ.ಎಚ್.ಎಸ್. ಪ್ರಕಾಶ್ ಅವರು ಗೋಮಾತೆಯ ಪ್ರತಿರೂಪ’ ಎಂದು ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಬಣ್ಣಿಸಿದರು.

ನಗರದ ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಷನ್ ಹಾಗೂ ಫ್ರೆಂಡ್ಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ರಿಕ್ರಿಯೇಷನ್ ಅಸೋಸಿಯೇಷನ್ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಮಾಜಿ ಶಾಸಕರಾದ ದಿ. ಎಚ್.ಎಸ್. ಪ್ರಕಾಶ್ ಸ್ಮರಣಾರ್ಥ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಹೊನಲು ಬೆಳಕಿನ ಫುಟ್‌ಬಾಲ್‌ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.

‘ಆದಿಚುಂಚನಗಿರಿಯ ಸದ್ಭಕ್ತರ ಪೈಕಿ ಒಬ್ಬರಾಗಿದ್ದ ದಿ.ಎಚ್.ಎಸ್. ಪ್ರಕಾಶ್ ಅವರು ಕ್ರೀಡೆಗಳಲ್ಲಿ ಬಹಳ ಆಸಕ್ತಿ ಹೊಂದಿದ್ದರು. ಅವರು ಶಾಸಕರಾಗಿದ್ದ ಅವಧಿಯಲ್ಲಿ ಕೂಡ ಅನೇಕ ಕ್ರೀಡಾ ಚಟುವಟಿಕೆಗಳನ್ನು ನಡೆಸುವ ಜೊತೆಗೆ ಅಪಾರ ಜನಸೇವೆ ಮೂಲಕವೇ ಜನಮನ್ನಣೆ ಗಳಿಸಿದ್ದರು. ಅವರು ಮಾಡಿರುವ ಒಳ್ಳೆಯ ಕೆಲಸಗಳು ಇಂದಿಗೂ ಜೀವಂತವಾಗಿವೆ’ ಎಂದರು.

ADVERTISEMENT

‘ಸೋಲನ್ನು ಹೃದಯಕ್ಕೆ, ಗೆಲುವನ್ನು ತಲೆಗೆ ಎಂದಿಗೂ ಏರಿಸಿಕೊಳ್ಳಬಾರದು. ಜೊತೆಗೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಸೋತವರು ಮುಂದಿನ ದಿನಗಳಲ್ಲಿ ಗೆಲ್ಲುವ, ಗೆದ್ದವರು ದೊಡ್ಡ ಗುರಿ ಜೊತೆಗೆ ಕಂಕಣಬದ್ಧ ನಿಲುವನ್ನು ಹೊಂದುವ ಮೂಲಕ ಕ್ರೀಡಾಕೂಟ ಯಶಸ್ವಿಗೊಳಿಸಬೇಕು ಎಂದ ಅವರು, ಎಚ್‌.ಎಸ್‌. ಪ್ರಕಾಶ್ ಅವರ ಸ್ಮರಣಾರ್ಥವಾಗಿ ಈ ಕ್ರೀಡಾಕೂಟ ಆಯೋಜಿಸಿರುವುದು ಶ್ಲಾಘನೀಯ’ ಎಂದರು.

ಶಾಸಕ ಸ್ವರೂಪ್ ಪ್ರಕಾಶ್ ಮಾತನಾಡಿ, ‘ಪ್ರತಿ ವರ್ಷದಂತೆ ಈ ವರ್ಷವೂ ಈ ಕ್ರೀಡಾಕೂಟ ಆಯೋಜಿಸಲಾಗಿದ್ದು, ತಮ್ಮ ತಂದೆ ಕ್ರೀಡಾಕೂಟದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ಅವರ ಸಹಪಾಠಿಗಳು, ಬೆಂಬಲಿಗರು ಹಾಗೂ ಅಭಿಮಾನಿಗಳು ಅರ್ಥಪೂರ್ಣವಾಗಿ ಒಂದು ಕಾರ್ಯಕ್ರಮ ಮಾಡಬೇಕು ಎಂದು ಯೋಚಿಸಿ ಈ ಕಾರ್ಯಕ್ರಮ ಆಯೋಜಿಸಿದ್ದಾರೆ’ ಎಂದರು.

‘ಈ ಪಂದ್ಯಾವಳಿಗೆ ಬೇರೆ ಬೇರೆ ಜಿಲ್ಲೆಗಳಿಂದ 32 ತಂಡಗಳು ಬಂದಿದ್ದು, ಮೂರು ದಿನಗಳ ಫುಟ್‌ಬಾಲ್‌ ಕ್ರೀಡಾಕೂಟ ಯಶಸ್ವಿಯಾಗಿ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು’ ಎಂದರು.

ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಒಕ್ಕಲಿಗರ ಸಂಘದ ನಿರ್ದೇಶಕ ರಘು ಗೌಡ, ನಗರಸಭೆ ಮಾಜಿ ಅಧ್ಯಕ್ಷ ಡಾ. ಅನಿಲಕುಮಾರ್, ಡಾ.ವಿಶ್ವನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕುಮಾರ್ ಹೊಸಕೊಪ್ಪಲು ಸುರೇಶ್, ಹೊಂಗೆರೆ ರಘು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.