ಹೃದಯಾಘಾತ
ಹಾಸನ: ಜಿಲ್ಲೆಯಲ್ಲಿ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವಿನ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅನಿಲ್ ಎಚ್. ನೇತೃತ್ವದ ತಂಡ ಪರಿಶೀಲನೆ ಆರಂಭಿಸಿದೆ.
ಮಂಗಳವಾರದಿಂದ ಮೃತರ ಮನೆಗಳಿಗೆ ಭೇಟಿ ನೀಡುತ್ತಿರುವ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಹೃದಯಾಘಾತದಿಂದ ನಿಧನರಾದ ತಾಲ್ಲೂಕಿನ ಚಿಕ್ಕಕೊಂಡಗುಳ ಗ್ರಾಮದ ಸತೀಶ್ ಅವರ ಮನೆಗೆ ಭೇಟಿ ನೀಡಿದ ತಂಡ, ಸತೀಶ್ ಅವರ ಪತ್ನಿ, ತಾಯಿಯಿಂದ ಮಾಹಿತಿ ಪಡೆಯಿತು.
ಆರ್‌ಸಿಎಚ್ ಅಧಿಕಾರಿ ಡಾ.ಚೇತನ್, ಔಷಧ ವಿಭಾಗದ ಡಾ.ಬಿಂದು ಅವರನ್ನು ಒಳಗೊಂಡ ತಂಡ, ಸತೀಶ್ ಅವರ ಆರೋಗ್ಯ ಸ್ಥಿತಿ ಹೇಗಿತ್ತು, ಆಹಾರ ಪದ್ಧತಿ ಹೇಗಿತ್ತು ಎಂಬಿತ್ಯಾದಿ ವಿವರಗಳನ್ನು ಕಲೆ ಹಾಕಿದೆ.
‘ಇದುವರೆಗೆ ವರದಿಯಾಗಿರುವ ಹೃದಯಾಘಾತದ ಸಾವುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲರ ಮನೆಗೆ ಭೇಟಿ ನೀಡಿ, ಮೃತರಿಗೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸಲಾಗುವುದು. ನಂತರ ಸಾವಿಗೆ ನಿಖರ ಕಾರಣ ಪತ್ತೆ ಮಾಡಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಡಿಎಚ್‌ಒ ಡಾ.ಅನಿಲ್ ತಿಳಿಸಿದ್ದಾರೆ.
ರೈತ ಸಾವು
ಹಾಸನ ತಾಲ್ಲೂಕಿನ ಮುಟ್ಟನಹಳ್ಳಿ ಗ್ರಾಮದ ರೈತ ಸಣ್ಣಪ್ಪಶೆಟ್ಟಿ (52) ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮನೆಯ ಮುಂದೆ ಕುಳಿತಿದ್ದ ಸಣ್ಣಪ್ಪಶೆಟ್ಟಿ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ 108 ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದು, ಆಂಬುಲೆನ್ಸ್ ಮನೆಯ ಬಳಿ ಬರುತ್ತಿದ್ದಂತೆ ಸಣ್ಣಪ್ಪ ಶೆಟ್ಟಿ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.