ಕೊಣನೂರು: ಹೋಬಳಿಯ ಮುದ್ದನಹಳ್ಳಿಯಲ್ಲಿನ ಅರಸೀಕಟ್ಟೆ ಅಮ್ಮ ದೇವಾಲಯ ಸಮಿತಿ ವತಿಯಿಂದ ಜ. 29 ರಂದು ಉಚಿತ ಎಚ್.ಪಿ.ವಿ. ಚುಚ್ಚುಮದ್ದು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಅಧ್ಯಕ್ಷ ಎ.ಟಿ. ರಾಮಸ್ವಾಮಿ ತಿಳಿಸಿದರು.
ಗರ್ಭಕೊರಳಿನ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ದೇಗುಲದ ಜಾತ್ರೆ ಸಂದರ್ಭದಲ್ಲಿ ಜ.17 ರಂದು 200 ಕ್ಕೂ ಹೆಚ್ಚು ಮಕ್ಕಳಿಗೆ ಚುಚ್ಚುಮದ್ದು ನೀಡಲಾಗಿತ್ತು. ಅಂದು ಸುಮಾರು 600 ಹೆಣ್ಣು ಮಕ್ಕಳು ಹೆಚ್ಚುವರಿಯಾಗಿ ನೋಂದಾಯಿಸಿದ್ದು, ನೋಂದಾಯಿಸಿರುವ ಎಲ್ಲರಿಗೂ 29 ರಂದು ಬೆಳಿಗ್ಗೆ 7.30 ಕ್ಕೆ ಅರಸೀಕಟ್ಟೆ ಅಮ್ಮನವರ ದೇವಾಲಯದ ಹೇಮಾವತಿ ಸಭಾಂಗಣದ ಬಳಿ ಚುಚ್ಚುಮದ್ದು ನೀಡಲಾಗುವುದು ಎಂದರು.
ತಾಲ್ಲೂಕಿನಾದ್ಯಂತ ಆಸಕ್ತ 9 ವರ್ಷದಿಂದ 14 ವರ್ಷದವರೆಗಿನ ಹೆಣ್ಣುಮಕ್ಕಳಿಗೆ ಚುಚ್ಚುಮದ್ದನ್ನು ದೇವಾಲಯ ಸಮಿತಿಯ ವತಿಯಿಂದ, ಇನ್ನರ್ ವೀಲ್ ಕ್ಲಬ್ ಆಫ್ ಹಾಸನ್ ಗೋಲ್ಡ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ನೀಡಲು ತೀರ್ಮಾನಿಸಲಾಗಿದೆ. ಆಸಕ್ತ ಹೆಣ್ಣುಮಕ್ಕಳು ಜ.29 ರಂದು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಎಂದರು.
ಹೆಸರು ನೋಂದಣಿಗೆ ವಯಸ್ಸಿನ ದೃಢೀಕರಣ ದಾಖಲಾತಿ ಕಡ್ಡಾಯವಾಗಿದೆ. 9–14 ವರ್ಷದೊಳಗಿನ ಎಲ್ಲ ಹೆಣ್ಣು ಮಕ್ಕಳು ಈ ಕಾರ್ಯಕ್ರಮದ ಸದುಪಯೋಗ ಪಡೆಯುವ ಮೂಲಕ ಮಾರಣಾಂತಿಕ ರೋಗ ತಡೆಗಟ್ಟಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.