ADVERTISEMENT

ಹಾಸನ| ನಾನೂ ಯಾರೊಂದಿಗೆ ಮಾತನಾಡಿಲ್ಲ: ಸ್ವರೂಪ್‌

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2023, 4:35 IST
Last Updated 4 ಮಾರ್ಚ್ 2023, 4:35 IST

ಹಾಸನ: ‘ನಾನು ಮತ್ತು ನನ್ನ ಕುಟುಂಬದವರು ಜೆಡಿಎಸ್ ಪಕ್ಷದ ಕಟ್ಟಾ ಬೆಂಬಲಿಗರು. ನಾನು ಹುಟ್ಟಿ ಬೆಳೆದಿದ್ದೆಲ್ಲಾ ಜೆಡಿಎಸ್‌ ಪರಿಸರದಲ್ಲಿಯೇ. ಬೇರೆ ಪಕ್ಷ ಸೇರುವ ಪ್ರಶ್ನೆ ಇಲ್ಲ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್‍.ಪಿ. ಸ್ವರೂಪ್ ಸ್ಪಷ್ಟಪಡಿಸಿದ್ದಾರೆ

ಪ್ರಕಟಣೆ ನೀಡಿರುವ ಅವರು, ‘2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಾಕಾಂಕ್ಷಿ. ಈ ವಿಚಾರದಲ್ಲಿ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ದ ಎಂದು ಹಲವು ಬಾರಿ ನಾನು ಸ್ಪಷ್ಟಪಡಿಸಿದ್ದೇನೆ’ ಎಂದು ಹೇಳಿದ್ದಾರೆ.

‘ಹೀಗಿದ್ದಾಗಲೂ ನಾನು ಕಾಂಗ್ರೆಸ್ ಪಕ್ಷದ ಸಂಪರ್ಕದಲ್ಲಿ ಇದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದೆಲ್ಲಾ ಊಹಾಪೋಹ. ನನ್ನನ್ನು ಯಾವ ಕಾಂಗ್ರೆಸ್ ಮುಖಂಡರೂ ಸಂಪರ್ಕಿಸಿಲ್ಲ. ನಾನು ಯಾವ ಕಾಂಗ್ರೆಸ್ ಮುಖಂಡರನ್ನೂ ಸಂಪರ್ಕಿಸುವ ಪ್ರಯತ್ನವನ್ನೂ ಮಾಡಿಲ್ಲ ಎಂದು ಪ್ರಮಾಣಪೂರ್ವಕ ಹೇಳುತ್ತೇನೆ‘ ಎಂದಿದ್ದಾರೆ.

ADVERTISEMENT

‘ನನಗೆ ಹೆಚ್.ಡಿ.ದೇವೇಗೌಡರೇ ದೇವರು, ಜೆಡಿಎಸ್ ಪಕ್ಷವೇ ಆಶ್ರಯ, ಎಚ್.ಡಿ. ರೇವಣ್ಣ, ಎಚ್.ಡಿ.ಕುಮಾರಣ್ಣ ರಾಜಕೀಯ ಆಶ್ರಯದಾತರು. ಹಾಗಾಗಿ ನಾನು ಬೇರೆ ಯಾವ ಪಕ್ಷದ ಸಂಪರ್ಕದಲ್ಲಿರುವೆ ಎಂಬುದು ಆಧಾರರಹಿತ ಮತ್ತು ನನಗೆ ತೊಂದರೆ ಕೊಡುವ ಪ್ರಯತ್ನಗಳು ಎಂದೇ ಭಾವಿಸುವೆ. ಹಾಗಾಗಿ ಮಾಧ್ಯಮಗಳಲ್ಲಿ ಕಾಂಗ್ರೆಸ್ ಸಂಪರ್ಕದಲ್ಲಿರುವೆ ಎಂಬ ವರದಿಗಳನ್ನು ಅಲ್ಲಗಳೆಯುತ್ತೇನೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.