ADVERTISEMENT

ಜಾವಗಲ್‌ನಲ್ಲಿ ಯೂರಿಯ ಅಭಾವ

ಇನ್ನೊಂದು ಗೊಬ್ಬರವನ್ನೂ ಖರೀದಿಸಲು ಅಂಗಡಿ ಮಾಲೀಕರ ಒತ್ತಡ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 2:39 IST
Last Updated 9 ಆಗಸ್ಟ್ 2025, 2:39 IST
ಜಾವಗಲ್ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ಶುಕ್ರವಾರ ರೈತರು ಸರತಿ ಸಾಲಿನಲ್ಲಿ ನಿಂತು ಯೂರಿಯಾ ಪಡೆದುಕೊಂಡರು 
ಜಾವಗಲ್ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ಶುಕ್ರವಾರ ರೈತರು ಸರತಿ ಸಾಲಿನಲ್ಲಿ ನಿಂತು ಯೂರಿಯಾ ಪಡೆದುಕೊಂಡರು    

ಜಾವಗಲ್: ಗ್ರಾಮದಲ್ಲಿ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ಯೂರಿಯಾ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಆದರೆ, ರೈತರ ಅವಶ್ಯಕತೆಗೆ ತಕ್ಕಂತೆ ಯೂರಿಯಾ ರಸ ಗೊಬ್ಬರ ಸಿಗದೆ ರೈತರು ಪರದಾಡುವ  ಸ್ಥಿತಿ ನಿರ್ಮಾಣವಾಗಿದೆ.

ಜಾವಗಲ್  ಹೋಬಳಿಯ ಬಹುತೇಕ ಕಡೆ ಬಿತ್ತನೆ ಮಾಡಿರುವ ಮೆಕ್ಕೆಜೋಳ, ಅಲಸಂದೆ, ರಾಗಿ, ಉದ್ದು,  ಇನ್ನಿತರ ಬೆಳೆಗಳಿಗೆ ತೇವಾಂಶ ಹೆಚ್ಚಾಗಿದೆ. ಈ ತೇವಾಂಶ ಶಮನಕ್ಕೆ ಯೂರಿಯ ಅಗತ್ಯವೆಂಬುದು ರೈತರ ನಂಬಿಕೆ. ಹೀಗಾಗಿ  ಗ್ರಾಮದ ಹಲವು ಗೊಬ್ಬರದ ಅಂಗಡಿಗಳ ಮುಂದೆ ರೈತರು ಯೂರಿಯ ಖರೀದಿಗಾಗಿ ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂದವು.

 ಹೋಬಳಿಯ 4000 ಹೆಕ್ಟರ್ ಪ್ರದೇಶದಲ್ಲಿ ವಿವಿಧ ಬೆಳೆಗೆ ಬಿತ್ತನೆ ಮಾಡಲಾಗಿದ್ದು, ರೈತ ಸಂಪರ್ಕದ ಕೇಂದ್ರದ ಮೂಲಕ 70 ಟನ್ ರಾಗಿ, 20 ಟನ್ ಮೆಕ್ಕೆಜೋಳ, 4 ಟನ್ ಅಲಸಂದೆ, 1, 370 ಕೆ.ಜಿ. ಹೆಸರು, 420 ಕೆ.ಜಿ. ಉದ್ದು, 240 ಕೆ.ಜಿ. ತೊಗರಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗಿದೆ.

ADVERTISEMENT

ಹೋಬಳಿಯ ಕೆಲವು ಕಡೆ ಬಿತ್ತನೆ ಮಾಡಿದ್ದರೂ ನಿರೀಕ್ಷೆಯಷ್ಟು ಮಳೆಯಾಗಿರಲಿಲ್ಲ. ಅಂಥವರು ಯೂರಿಯಾ ಗೊಬ್ಬರವನ್ನು ಬಳಕೆ ಮಾಡಿಲ್ಲ.  ಆದರೆ, ಮೂರು ದಿನಗಳಿಂದ ಸತತ ಮಳೆಯಾಗುತ್ತಿರುವ ಕಾರಣ ಯೂರಿಯ  ಖರೀದಿಗೆ ರೈತರು ಆಸಕ್ತಿ ತೋರುತ್ತಿದ್ದು, ಒಮ್ಮೆಲೇಬೇಡಿಕೆ ಹೆಚ್ಚಿ  ಅಂಗಡಿಗಳಲ್ಲಿ  ಕೊರತೆ ಉಂಟಾಗುತ್ತಿದೆ ಎಂಬುದು ಗೊಬ್ಬರದ ಅಂಗಡಿ ಮಾಲೀಕರ ಮಾತು.

ಗ್ರಾಮದಲ್ಲಿ ಈಗಾಗಲೇ ಯೂರಿಯಾ ಗೊಬ್ಬರದ ಕೊರತೆ ತಲೆದೋರಿದ್ದು, ಸಮಸ್ಯೆ ತೀವ್ರಗೊಳ್ಳುವ ಮೊದಲು  ಅಧಿಕಾರಿಗಳು ಎಚ್ಚೆತ್ತು ರೈತರಿಗೆ ಅಗತ್ಯವಿರುವ ಯೂರಿಯ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು.

ಯೂರಿಯಾ ಜತೆ ಇನ್ನೊಂದು: ಒತ್ತಡ ‘ಕೆಲವು ಗೊಬ್ಬರದ ಅಂಗಡಿಗಳಲ್ಲಿ ಯೂರಿಯವನ್ನು ಪಡೆಯಬೇಕಾದರೆ ಇದರ ಜೊತೆಗೆ ಮತ್ತೊಂದು ಗೊಬ್ಬರವನ್ನೂ ಖರೀದಿ ಮಾಡಬೇಕೆಂಬ ನಿಯಮವನ್ನು  ಮಾಲೀಕರು ಒತ್ತಾಯಿಸುತ್ತಿದ್ದಾರೆ’ ಎಂಧು ರೈತರು ದೂರಿದರು. ‘ಇದರಿಂದ ತಮಗೆ ಅಗತ್ಯವಿಲ್ಲದಿದ್ದರೂ  ಯೂರಿಯ ಪಡೆಯುವುದಕ್ಕಾಗಿ ಮತ್ತೊಂದು ಗೊಬ್ಬರವನ್ನು ಖರೀದಿ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ’ ಎಂದು ಗ್ರಾಮದ ಹಲವು ರೈತರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.