ಹಾಸನ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರ್ಕಾರ ಬಡಜನರ ರಕ್ತ ಹೀರುತ್ತಿದೆ ಎಂದು ಕೆಪಿಸಿಸಿ ವಕ್ತಾರ ಕಶ್ಯಪ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪ್ರತಿ ಬ್ಯಾರಲ್ ಕಚ್ಚಾ ತೈಲದ ಬೆಲೆ 107 ಡಾಲರ್ ಇತ್ತು. ಅಂದು ಲೀಟರ್ ಪೆಟ್ರೋಲ್ ಬೆಲೆ ₹66 ಇತ್ತು. ಇಂದು ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್‌ಗೆ ಕೇವಲ 61 ಡಾಲರ್ ಇದ್ದರೂ, ಶೇ 35ರಷ್ಟು ತೆರಿಗೆ ವಿಧಿಸುವ ಮೂಲಕ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಸಿದೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರದ ಅಧಿಕಾರ ಅವಧಿಯಲ್ಲಿ ₹450ರಿಂದ ₹500 ಇದ್ದ ಅಡುಗೆ ಅನಿಲ ಸಿಲಿಂಡರ್ ಬೆಲೆ ಇಂದು ₹950ಕ್ಕೆ ತಲುಪಿದೆ. ಟೋಲ್ ಮೂಲಕವೂ ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ ಎಂದು ಟೀಕಿಸಿದರು.
ಸುಮಾರು 150ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ ಆರ್ಥಿಕ ಹೊರೆ ನೀಡಿದೆ. ಸಿಮೆಂಟ್ ಸೇರಿದಂತೆ ಇತರೆ ವಸ್ತುಗಳ ಬೆಲೆ ಏರಿಕೆ ವಿಪರೀತವಾಗಿದೆ. ಊಟ, ಔಷಧಿ ಸೇರಿದಂತೆ ನಿತ್ಯ ಬಳಕೆಯ ಆಹಾರ ಪದಾರ್ಥಗಳ ಮೇಲೆಯೂ ಜಿಎಸ್‌ಟಿ ವಿಧಿಸುವ ಮೂಲಕ ಜನರು ತತ್ತರಿಸುವಂತೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ರಾಜ್ಯಕ್ಕೆ ತೆರಿಗೆ ಪಾಲು ಸಮರ್ಪಕವಾಗಿ ವಿತರಣೆ ಮಾಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನ್ಯಾಯಾಲಯದ ಮೂಲಕ ಹೋರಾಟ ಮಾಡಿದ ಪರಿಣಾಮ ಕೇಂದ್ರ ಸರ್ಕಾರ ₹11 ಸಾವಿರ ಕೋಟಿ ಬಿಡುಗಡೆ ಮಾಡಿದೆ. ಬಿಜೆಪಿ ನಾಯಕರು ಜನಾಕ್ರೋಶ ಯಾತ್ರೆ ಮಾಡುವ ಬದಲು, ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರುದ್ಧ ಹೋರಾಟ ಮಾಡಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಜಿಲ್ಲಾ ಘಟಕದ ವಕ್ತಾರ ದೇವರಾಜೇಗೌಡ, ಮಂಜುನಾಥ ಶರ್ಮಾ, ಮಲ್ಲಿಗೆವಾಳು ದೇವಪ್ಪ, ಶಿವಕುಮಾರ್, ರಘು ದಾಸರಕೊಪ್ಪಲು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.