ಕೊಣನೂರು:ಶಿಕ್ಷಣದ ಕಲಿಕೆ ಜೊತೆಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯು ಸಾಗಬೇಕು ಎಂದು ಸಾಲಿಗ್ರಾಮ ತಾಲ್ಲೂಕಿನ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಆಧಿಕಾರಿ ರವಿ ಎನ್. ಅಭಿಪ್ರಾಯಪಟ್ಟರು.
ಪಟ್ಟಣದ ಬಿ.ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕಾರ್ಯಗಾರ ಮಾರ್ಗದರ್ಶಿ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ಏನನ್ನಾದರೂ ಸಾಧಿಸಬೇಕಾದಲ್ಲಿ ಅವರಲ್ಲಿ ಪ್ರಬಲವಾದ ಆಕಾಂಕ್ಷೆ, ಆಸಕ್ತಿ, ಪರಿಶ್ರಮ ಹಾಗೂ ಯೋಜಿತವಾದ ಮಾರ್ಗವಿರಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಣ ಹಾಗೂ ಸ್ಪರ್ಧಾತ್ಮಕತೆ ಬಗ್ಗೆ ಮಧ್ಯೆ ಅಂತರವಿದೆ. ಪ್ರಾಧ್ಯಾಪಕರು ಶಿಕ್ಷಣದ ಜೊತೆಗೆ ಭವಿಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯಕ್ಕೆ ತಕ್ಕಂತೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಬೇಕು. ನಿಮಗೆ ತ್ಯಾಗ ಮಾಡುವ ಮನಸ್ಸಿದ್ದರೆ, ಬಿಟ್ಟುಕೊಡುವ ಸಾಮರ್ಧ್ಯವಿದ್ದರೆ ಹಾಗೂ ನಿಮ್ಮನ್ನು ನೀವು ಅರ್ಪಣೆ ಮಾಡುವ ಮನಸ್ಸಿದ್ದರೆ ಮಾತ್ರ ನಾಗರಿಕ ಸೇವೆ ಆಯ್ಕೆ ಮಾಡಿಕೊಳ್ಳಿ. ಉದ್ಯೋಗಕ್ಕೆ ಹಲವಾರು ಅವಕಾಶಗಳಿವೆ. ಸರ್ಕಾರಿ ಹುದ್ದೆಗಳ ಬಗ್ಗೆಯೇ ಭ್ರಮೆ ಇಟ್ಟುಕೊಳ್ಳಬೇಡಿ. ನಿಮ್ಮ ಕೌಶಲ ಅಭಿವೃದ್ಧಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಮೈಸೂರು ಗ್ಲೋಬಲ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಅಕಾಡೆಮಿ ಸಂಸ್ಥಾಪಕ ರಾಜೇಶ್ ಕೆ. ಮಾತನಾಡಿ, ಸರ್ಕಾರಿ ಉದ್ಯೋಗ ಬಯಸುವ ವಿದ್ಯಾರ್ಥಿಗಳು ಪಠ್ಯದ ಜೊತೆಗೆ ತಾವು ತಿಳಿದುಕೊಳ್ಳುವ ಪ್ರತಿ ವಿಷಯವನ್ನು ಕೂಲಂಕಷವಾಗಿ ತಿಳಿದುಕೊಂಡಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಂಡಂತೆಯೇ. ಖಾಸಗಿ ಕ್ಷೇತ್ರದಲ್ಲಿ, ನೀವು ಪಡೆದ ಅಂಕಗಳಿಗಿಂತ ನಿಮ್ಮ ಸಂವಹನ ಮತ್ತು ಕೌಶಲ್ಯ ಮುಖ್ಯವಾಗುತ್ತದೆ. ಪಠ್ಯಕ್ರಮಕ್ಕಷ್ಟೇ ಸೀಮಿತವಾಗದೆ, ಆಯ್ಕೆಯ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಿರುವ ವಿವಿಧ ಕೌಶಲ ಕಲಿಯಿರಿ ಎಂದು ಕಿವಿಮಾತು ಹೇಳಿದರು.
ಕಾಲೇಜಿನ ವಾಣಿಜ್ಯ ವಿಭಾಗದ ಅಧ್ಯಾಪಕ ಪುನೀತ್ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಕುರಿತಂತೆ ಮಾಹಿತಿ ನೀಡಿದರು.
ಕಾಲೇಜು ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷ ಎಸ್.ಸಿ. ಚೌಡೇಗೌಡ ಮಾತನಾಡಿ, ‘ನಿಮ್ಮನ್ನು ನೀವು ಸರಿಮಾಡಿಕೊಂಡು ನಿಮ್ಮ ಗುರಿಯತ್ತ ಗಮನ ಕೇಂದ್ರೀಕರಿಸಿದಲ್ಲಿ ಯಶಸ್ಸು ನಿಮ್ಮ ಪಾಲಿಗಿರುತ್ತದೆ. ಎರಡು ತಿಂಗಳ ಕಾಲ ಪ್ರತಿದಿನ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಸದುಪಯೋಗಪಡಿಸಿಕೊಳ್ಳಿ’ ಎಂದರು.
ಪ್ರಾಂಶುಪಾಲ ರಾಜೀವ್, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.