ADVERTISEMENT

ಹಾಸನ: ಕಾಲೇಜಿನಲ್ಲಿ ಶೇ 10ಕ್ಕೂ ಕಡಿಮೆ ಹಾಜರಾತಿ

ಏಳು ದಿನ ಕಳೆದರೂ ಬಾರದ ವಿದ್ಯಾರ್ಥಿಗಳು

ಕೆ.ಎಸ್.ಸುನಿಲ್
Published 24 ನವೆಂಬರ್ 2020, 13:17 IST
Last Updated 24 ನವೆಂಬರ್ 2020, 13:17 IST
ಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಬೆರಳಣಿಕೆಯಷ್ಟು ವಿದ್ಯಾರ್ಥಿನಿಯರು ಬಂದಿದ್ದರು.
ಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಬೆರಳಣಿಕೆಯಷ್ಟು ವಿದ್ಯಾರ್ಥಿನಿಯರು ಬಂದಿದ್ದರು.   

ಹಾಸನ: ಅಂತಿಮ ಪದವಿ ತರಗತಿ ಶುರುವಾಗಿ ಏಳು ದಿನ ಕಳೆದರೂ ಕಾಲೇಜುಗಳತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿಲ್ಲ. ಶೇಕಡಾ 10ಕ್ಕೂ ಕಡಿಮೆ ಹಾಜರಾತಿ ಇದೆ.

ಮೊದಲ ದಿನ ಜಿಲ್ಲೆಯ 29 ಸರ್ಕಾರಿ ಕಾಲೇಜುಗಳಿಂದ 296 ವಿದ್ಯಾರ್ಥಿಗಳು ಹಾಜರಾಗಿದ್ದರು. ಒಂದರೆಡು ದಿನದಲ್ಲಿ
ಪರಿಸ್ಥಿತಿ ಸುಧಾರಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ, ವಾರ ಕಳೆದರೂ ನಿರೀಕ್ಷಿಸಿದಷ್ಟು ವಿದ್ಯಾರ್ಥಿಗಳು ತರಗತಿಗೆ ಬರುತ್ತಿಲ್ಲ‌. ಹಾಜರಾತಿ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು, ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಕಾದು ಕುಳಿತಿದ್ದಾರೆ.

ವಿದ್ಯಾರ್ಥಿಗಳು ತರಗತಿಗೆ ಹಾಜರಾಗಬೇಕಾದರೆ ಕೋವಿಡ್‌ ಪ್ರಮಾಣ ಪತ್ರ ಹಾಗೂ ಪೋಷಕರ ಒಪ್ಪಿಗೆ ಪತ್ರ
ಕಡ್ಡಾಯಗೊಳಿಸಿರುವುದು, ಕೋವಿಡ್‌ ಪರೀಕ್ಷೆ ವರದಿ ವಿಳಂಬ ಆಗುತ್ತಿರುವುದು ಹಾಗೂ ಮತ್ತೆ ಕೆಲವರಿಗೆ ಕೋವಿಡ್‌ ಪರೀಕ್ಷೆ ಎಲ್ಲಿ ಮಾಡಿಸಬೇಕು ಎಂಬ ಗೊಂದಲ ಉಂಟಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಕಾಲೇಜಿನತ್ತ ಸುಳಿಯುತ್ತಿಲ್ಲ.

ಅಲ್ಲದೇ ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆದಿರುವ ಬಹುತೇಕ ವಿದ್ಯಾರ್ಥಿಗಳು ಬಡವರು ಹಾಗೂ ಗ್ರಾಮೀಣ ಪ್ರದೇಶದಿಂದ ಬರುವವರೇ ಹೆಚ್ಚು. ಸಾರಿಗೆ ವ್ಯವಸ್ಥೆ ಇಲ್ಲದೆ ಹೈರಾಣಾಗಿದ್ದಾರೆ. ಪ್ರಸಕ್ತ ವರ್ಷದ ಬಸ್‌ ಪಾಸ್‌ ನೀಡದ ಕಾರಣ ವಿದ್ಯಾರ್ಥಿಗಳು ಹಣ ನೀಡಿ ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮತ್ತಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ.

ಆನ್‌ಲೈನ್‌, ಆಫ್‌ ಲೈನ್‌ ತರಗತಿಗಳೆರಡಕ್ಕೂ ಅವಕಾಶ ನೀಡಲಾಗಿದೆ. ಆನ್‌ಲೈನ್‌ ತರಗತಿಗೆ ವಿದ್ಯಾರ್ಥಿಗಳು ಹೆಚ್ಚು
ಹಾಜರಾಗುತ್ತಿದ್ದಾರೆ. ಹಾಸನ ನಗರದಲ್ಲಿ ಏಳು ಕೋವಿಡ್‌ ಪರೀಕ್ಷಾ ಕೇಂದ್ರ ತೆರೆಯಲಾಗಿದೆ. ಪರೀಕ್ಷಾ ಕೇಂದ್ರಕ್ಕೂ
ವಿದ್ಯಾರ್ಥಿಗಳು ಬರುತ್ತಿಲ್ಲ.

ನಗರದ ಗಂಧದ ಕೋಠಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಅಂತಿಮ ಪದವಿ ತರಗತಿಯ ಒಟ್ಟು 168 ವಿದ್ಯಾರ್ಥಿನಿಯರ ಪೈಕಿ 40 ಮಂದಿ ಹಾಜರಾಗಿದ್ದರೆ, ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ತರಗತಿಯಲ್ಲಿ 800 ವಿದ್ಯಾರ್ಥಿಗಳ ಪೈಕಿ 74 ಮಂದಿ ಬಂದಿದ್ದರು. ಆದರೆ ಆನ್‌ಲೈನ್‌ ತರಗತಿಗೆ 633 ಮಂದಿ
ಹಾಜರಾಗಿದ್ದರು.

ADVERTISEMENT

ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ಮತ್ತು ಬಿಕಾಂ ತರಗತಿಯಲ್ಲಿ 600 ವಿದ್ಯಾರ್ಥಿಗಳ ಪೈಕಿ 26 ವಿದ್ಯಾರ್ಥಿಗಳು ಬಂದಿದ್ದರು.

‘ಆನ್‌ಲೈನ್‌ ತರಗತಿಗೆ ಹೋಲಿಸಿದರೆ ಆಫ್‌ಲೈನ್‌ ತರಗತಿಗೆ ವಿದ್ಯಾರ್ಥಿಗಳ ಪ್ರತಿಕ್ರಿಯೆ ನೀರಸವಾಗಿದೆ’ ಎಂದು
ಪ್ರಾಂಶುಪಾಲ ಮಹೇಂದ್ರ ಕುಮಾರ್‌ ತಿಳಿಸಿದರು.

ಹಾಸನದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ತರಗತಿಗಳಲ್ಲಿ 816 ಪೈಕಿ 70
ವಿದ್ಯಾರ್ಥಿನಿಯರು ಮಾತ್ರ ತರಗತಿಗೆ ಹಾಜರಾಗಿದ್ದರು. ‘ಕೊರೊನಾ ಪರೀಕ್ಷಾ ವರದಿ ಸಿಗುವುದು ವಿಳಂಬವಾಗುತ್ತಿದೆ. ಹಾಗಾಗಿ ವಿದ್ಯಾರ್ಥಿನಿಯರು ತರಗತಿಗೆ ಬರುತ್ತಿಲ್ಲ. ಪರಿಸ್ಥಿತಿ ಸುಧಾರಿಸಬಹುದು’ ಎಂದು ಪ್ರಾಂಶುಪಾಲ ಕೆ.ಟಿ.ಕೃಷ್ಣೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.