ಅರಸೀಕೆರೆ: ರಾಜ್ಯದ ತಿರುಪತಿಯೆಂದೇ ಪ್ರಸಿದ್ಧಿ ಪಡೆದಿರುವ ಅರಸೀಕೆರೆಯ ಮಾಲೇಕಲ್ಲು ತಿರುಪತಿಯ ವೆಂಕಟರಮಣ ಸ್ವಾಮಿಯ ಜಾತ್ರಾ ಮಹೋತ್ಸವವು ಆಷಾಢ ದ್ವಾದಶಿ (ಜುಲೈ 7)ಯಂದು ನಡೆಯಲಿದ್ದು, ಲಕ್ಷಾಂತರ ಭಕ್ತರು ಭಾಗವಹಿಸಿ ರಥೋತ್ಸವದ ವೈಭವವನ್ನು ಕಣ್ತುಂಬಿಕೊಳ್ಳಲಿದ್ದಾರೆ. ಆಡಳಿತ ಮಂಡಳಿ ಭರದ ಸಿದ್ಧತೆಯಲ್ಲಿ ತೊಡಗಿದೆ.
ಅರಸೀಕೆರೆ ನಗರದಿಂದ 2 ಕಿ.ಮೀ. ದೂರದಲ್ಲಿರುವ ಮಾಲೇಕಲ್ಲು ತಿರುಪತಿ ಕ್ಷೇತ್ರ ಪವಿತ್ರ ಯಾತ್ರಾಸ್ಥಳ. ಪ್ರಕೃತಿ ಸೌಂದರ್ಯಗಳ ಪ್ರವಾಸಿ ತಾಣವೂ ಆಗಿದೆ. ರಾಜ್ಯದ ಬಹುಭಾಗಗಳಿಂದ ಅಪಾರ ಭಕ್ತ ಸಮೂಹದಿಂದ ಈ ಪುಣ್ಯಕ್ಷೇತ್ರ ಪ್ರಸಿದ್ಧಿಯಾಗಿದ್ದು, ನಗರದಿಂದ ಈಶಾನ್ಯ ಭಾಗದ ನಿಸರ್ಗ ವೈಭವವು ಭಕ್ತರನ್ನು ಸೆಳೆಯುತ್ತಿದೆ.
ಬೆಟ್ಟದ ಕೆಳಗೆ ಗೋವಿಂದರಾಜ ಸ್ವಾಮಿ ಮೂರ್ತಿಯೂ ಮಲಗಿರುವ ಭಂಗಿಯಲ್ಲಿದ್ದು, ಮಹಾಲಕ್ಷ್ಮೀ ದೇವಿಯೂ ವರ ನೀಡುವ ಭಂಗಿಯಲ್ಲಿ ನೆಲೆಸಿರುವುದು ವಿಶೇಷ. ಈ ಜಾತ್ರೆಯಲ್ಲಿ ವಿಶೇಷವಾಗಿ ನವ ವಧು-ವರರು ಭಾಗವಹಿಸಿ, ದೇವರ ದರ್ಶನ ಪಡೆಯುತ್ತಾರೆ. ಕಡಿದಾದ 1,200 ಮೆಟ್ಟಿಲುಗಳನ್ನು ಹೊಂದಿರುವ ಮಾಲೇಕಲ್ ತಿರುಪತಿ ಬೆಟ್ಟವನ್ನು ಹತ್ತಿ, ಬೆಟ್ಟದ ಮೇಲಿರುವ ಶ್ರೀನಿವಾಸ-ಮಹಾಲಕ್ಷ್ಮೀ ದೇವರ ದರ್ಶನ ಪಡೆದರೆ ಅವರ ಜೀವನ ಸುಖಕರ ಆಗುವುದೆಂಬ ಪ್ರತೀತಿ ಇದೆ.
ಪೃಕೃತಿಯ ಮಡಿಲಲ್ಲಿರುವ ಅಮರಗಿರಿಯು ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ಇದು ವಸಿಷ್ಠ ಮಹಾ ಋಷಿಗಳು ಶ್ರೀಮನ್ ನಾರಾಯಣನನ್ನು ಕುರಿತು ತಪಸ್ಸು ಮಾಡಿದ ಪುಣ್ಯಸ್ಥಳ. ಅವರು ಆಷಾಢ ಮಾಸದ ದ್ವಾದಶಿಯಂದು ಶ್ರೀಮನ್ ನಾರಾಯಣನ ದರ್ಶನ ಪಡೆದು ವಿಗ್ರಹವನ್ನು ಪ್ರತಿಷ್ಠಾಪಿಸಿದರೆಂದು ಹೇಳಲಾಗುತ್ತದೆ.
ಮಾಲೇಕಲ್ ಹೆಸರು: 800 ವರ್ಷಗಳ ಹಿಂದೆ ಈ ಪ್ರಾಂತ್ಯವನ್ನು ಆಳುತ್ತಿದ್ದ ಚಿತ್ರದುರ್ಗದ ಅರಸನ ಪಾಳೇಗಾರನಾದ ತಿಮ್ಮಪ್ಪ ನಾಯ್ಕನು ಪ್ರತಿವರ್ಷ ಮನೆ ದೇವರಾದ ವೆಂಕಟರಮಣ ಸ್ವಾಮಿ ದರ್ಶನಕ್ಕಾಗಿ ದೊಡ್ಡ ತಿರುಪತಿಗೆ ಯಾತ್ರೆ ಕೈಗೊಳ್ಳುತ್ತಿದ್ದ.
ಒಂದು ವರ್ಷ ಯಾತ್ರೆ ಮಾಡಲು ಸಾಧ್ಯವಾಗದೇ ಚಿಂತೆಯಲ್ಲಿ ಚಿಕ್ಕ ತಿರುಪತಿ ಬೆಟ್ಟದ ತಪ್ಪಲಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ಶ್ರೀನಿವಾಸ ಕನಸಿನಲ್ಲಿ ಕಾಣಿಸಿಕೊಂಡು, ನಾನು ಇಲ್ಲಿಯೇ ದರ್ಶನ ಕೊಡುತ್ತೇನೆ. ಅದಕ್ಕಾಗಿ ನೀನು ಬೆಟ್ಟದ ಮೇಲೆ ತುಳಸಿ ಮಾಲೆ ಬಿದ್ದಿರುವಂತೆಯೇ ದಾರಿಯನ್ನು ಮಾಡಿಸು ಎಂದು ಆಜ್ಞಾಪಿಸಿದನಂತೆ.
ಅದರಂತೆ ದಾರಿ ಮಾಡಿಸಿ, ಮೆಟ್ಟಿಲುಗಳನ್ನು ನಿರ್ಮಿಸಿ, ದೇವರ ದರ್ಶನ ಪಡೆದರೆಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಈ ಸ್ಥಳಕ್ಕೆ ಮಾಲೇಕಲ್ ತಿರುಪತಿ ಎಂದು ಹೆಸರು ಬಂತೆಂಬ ಪ್ರತೀತಿ ಇದೆ.
ತಿಮ್ಮಪ್ಪನಾಯಕನು ಊರಿನ ಜನರ ಅನುಕೂಲಕ್ಕಾಗಿ ಇಲ್ಲಿಂದ 2 ಕಿ.ಮೀ. ದೂರದ ಬೆಟ್ಟದಲ್ಲಿ ಕೆರೆಯನ್ನು ಕಟ್ಟಿಸಲು ಅಗೆದಾಗ, ಕೆರೆಯ ಅಂಗಳದಲ್ಲಿ ಪೂರ್ಣ ಸಾಲಿಗ್ರಾಮದ ಶಿಲೆಯಿಂದ ಕೂಡಿದ ಗೋವಿಂದರಾಜಸ್ವಾಮಿ ವಿಗ್ರಹ ದೊರೆತಿದ್ದು, ಆ ವಿಗ್ರಹವನ್ನು ತಂದು ಬೆಟ್ಟದ ತಪ್ಪಲಿನಲ್ಲಿ ಪ್ರತಿಷ್ಠಾಪಿಸಿ ದೇವಾಲಯ ನಿರ್ಮಿಸಲಾಗಿದೆ.
ಇದರ ಪಕ್ಕದಲ್ಲಿ ಮಹಾಲಕ್ಷ್ಮಿ ಅಮ್ಮನವರ ದೇವರನ್ನು ಪ್ರತಿಷ್ಠಾಪಿಸಲಾಗಿದ್ದು, ಕೆಂಚರಾಯಸ್ವಾಮಿ, ಬೆಟ್ಟದ ಬಾಗಿಲ ಬಳಿ ಆಂಜನೇಯ ಸ್ವಾಮಿ ದೇವಾಲಯವಿದೆ. ನಂತರ ಮಹಾಮಂಟಪವಿದ್ದು, ಅಮ್ಮನವರ ಆಭರಣ ಪೆಟ್ಟಿಗೆ, ಆದಿಶೇಷನ ವಿಗ್ರಹ, ಅಮ್ಮನವರ ಪಾದುಕೆಗಳು ಕಂಡುಬರುತ್ತವೆ.
- ಪ್ರತಿ ವರ್ಷ ನವ ವಧು–ವರರು ಪಾಲ್ಗೊಳ್ಳುವುದು ವಿಶೇಷ 1200 ಮೆಟ್ಟಿಲುಗಳನ್ನು ಹತ್ತಿ ದೇವರ ದರ್ಶನ ಪಡೆಯುವ ಭಕ್ತರು ವಸಿಷ್ಠ ಋಷಿಗಳು ತಪಸ್ಸು ಮಾಡಿದ ಪುಣ್ಯಸ್ಥಳವೆಂಬ ಪ್ರತೀತಿ
ಜಾತ್ರೆಯ ಸಮಯದಲ್ಲಿ ಮೂಲಸೌಕರ್ಯ ಜನಸಂದಣಿ ನಿಯಂತ್ರಣ ಪ್ರಸಾದದ ವ್ಯವಸ್ಥೆ ಸುಗಮ ಸಂಚಾರಗಳ ವ್ಯವಸ್ಥೆ ಮಾಡಬೇಕು. ರಾಜಗೋಪುರ ಯಾತ್ರಿ ನಿವಾಸಗಳ ಉದ್ಘಾಟನೆ ಆಗದಿರುವುದು ಭಕ್ತರಿಗೆ ಅಸಮಾಧಾನವಾಗಿದೆಮೊದಲಿಯಾರ್ ಉಮಾಪತಿ ತಿರುಪತಿ ನಿವಾಸಿ
ರಾಜ್ಯದಲ್ಲೇ ಅಪಾರ ಭಕ್ತರನ್ನು ಹೊಂದಿರುವ ಈ ಪವಿತ್ರ ಸ್ಥಳವನ್ನು ಯಾತ್ರಾ ಸ್ಥಳವನ್ನಾಗಿಸಲು ಶ್ರಮಿಸಲಾಗುವುದು. ಕೆಲವೇ ದಿನಗಳಲ್ಲಿ ರಾಜಗೋಪುರ ಹಾಗೂ ಯಾತ್ರಿ ನಿವಾಸವನ್ನು ಉದ್ಘಾಟಿಸಿ ಭಕ್ತರಿಗೆ ಅನೂಕೂಲ ಕಲ್ಪಿಸಲಾಗುವುದುಕೆ.ಎಂ. ಶಿವಲಿಂಗೇಗೌಡ ಶಾಸಕ
- ಚಾರಣ ಪ್ರವಾಸಿ ತಾಣ ಈ ತಿರುಪತಿ ಬೆಟ್ಟ ಹಾಸನ ಜಿಲ್ಲೆಯ ಪ್ರಸಿದ್ಧ ತಾಣ ಬೆಟ್ಟ ಚಾರಣಕ್ಕೂ ಪ್ರಸಿದ್ಧಿಯಾಗಿದೆ. ಬಾಗಿಲ ಆಂಜನೇಯ ದೇವಾಲಯ ಗುಂಡಮ್ಮ ದೇವಾಲಯ ಕೋಡಿಗಲ್ಲು ಕೆಂಚರಾಯಸ್ವಾಮಿ ದೇವಾಲಯ ಗೋವಿಂದರಾಜ ಸ್ವಾಮಿ ದೇವಾಲಯ ಪುಷ್ಕರಣಿಗಳಿದ್ದು ಪ್ರವಾಸಿ ತಾಣವೂ ಆಗಿದೆ. ಅತ್ಯಂತ ಹಿಂದುಳಿದ ಈ ಕ್ಷೇತ್ರದಲ್ಲಿ 4-5 ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಇತ್ತೀಚಿಗೆ ದಾನಿಗಳಾದ ಶ್ರೀಧರ್ ಮೂರ್ತಿ ಎಂಬುವವರು ಕಲ್ಯಾಣಿಯ ಬಳಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ವಿಷ್ಣುವಿನ ದಶಾವತಾರದ ಮೂರ್ತಿಗಳನ್ನು ನವೀನ ರೀತಿಯಲ್ಲಿ ಮಾಡಿಸಿದ್ದು ಅದಕ್ಕೆ ಆಧುನಿಕ ಶೈಲಿಯ ಸ್ಪರ್ಶ ಕೊಟ್ಟಿರುವುದು ಭಕ್ತರ ಗಮನ ಸೆಳೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.