ADVERTISEMENT

ಯಾತ್ರಾ ಸ್ಥಳವಾಗಿ ಮಾಲೇಕಲ್ಲು ತಿರುಪತಿ: ಶಾಸಕ ಕೆ.ಎಂ.ಶಿವಲಿಂಗೇಗೌಡ ಭರವಸೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2025, 12:45 IST
Last Updated 23 ಜೂನ್ 2025, 12:45 IST
ಅರಸೀಕೆರೆ ಹೊರವಲಯದಲ್ಲಿರುವ ಮಾಲೇಕಲ್ಲು ತಿರುಪತಿಯ ವೆಂಟಕರಮಣ ದೇವಸ್ಥಾನದ ದಾಸೋಹ ಮಂದಿರ ನಿರ್ಮಾಣದ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಭೂಮಿ ಪೂಜೆ ನೆರವೇರಿಸಿದರು
ಅರಸೀಕೆರೆ ಹೊರವಲಯದಲ್ಲಿರುವ ಮಾಲೇಕಲ್ಲು ತಿರುಪತಿಯ ವೆಂಟಕರಮಣ ದೇವಸ್ಥಾನದ ದಾಸೋಹ ಮಂದಿರ ನಿರ್ಮಾಣದ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಭೂಮಿ ಪೂಜೆ ನೆರವೇರಿಸಿದರು   

ಅರಸೀಕೆರೆ: ರಾಜ್ಯದ ತಿರುಪತಿ ಎಂದೇ ಹೆಸರುವಾಸಿಯಾಗಿರುವ ಅರಸೀಕೆರೆ ಮಾಲೇಕಲ್ಲು ತಿರುಪತಿಯಲ್ಲಿ ವಿಶಿಷ್ಟ ಕಾರ್ಯಗಳನ್ನು ಮಾಡುವ ಮೂಲಕ ಪವಿತ್ರ ಯಾತ್ರಾ ಸ್ಥಳವನ್ನಾಗಿಸಲಾಗುವುದು ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.

ನಗರದ ಹೊರವಲಯದ ಮಾಲೇಕಲ್ಲು ತಿರುಪತಿಯ ವೆಂಕಟರಮಣ ದೇವಸ್ಥಾನದ ಪಕ್ಕದಲ್ಲಿ ₹50 ಲಕ್ಷ ವೆಚ್ಚದಲ್ಲಿ ದಾಸೋಹ ಮಂದಿರ ಸೇರಿದಂತೆ ಅಗತ್ಯ ಕಟ್ಟಡಗಳ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಮಾಲೇಕಲ್ಲು ತಿರುಪತಿ ಸನ್ನಿಧಿಗೆ ಸಾವಿರಾರು ಭಕ್ತರು ಭೇಟಿ ನೀಡಲಿದ್ದು, ಭಕ್ತರಿಗೆ ಅನೂಕೂಲ ಕಲ್ಪಿಸಲಾಗುವುದು. ನಿತ್ಯ ದಾಸೋಹದ ವ್ಯವಸ್ಥೆಯೂ ನಿರಂತರವಾಗಿ ನಡೆಸಲು ದಾಸೋಹ ಮಂದಿರ ಕಾಮಗಾರಿಯನ್ನು ಶೀಘ್ರಗತಿಯಲ್ಲಿ ಮುಗಿಸುವಂತೆ ಗುತ್ತಿಗೆದಾರರಿಗೆ ತಿಳಿಸಲಾಗಿದೆ’ ಎಂದರು.

ADVERTISEMENT

‘ದೇವಾಲಯದ ರಾಜಗೋಪುರ ಹಾಗೂ ಯಾತ್ರಿ ನಿವಾಸ ಕಟ್ಟಡ ಪೂರ್ಣಗೊಂಡಿದ್ದು, ಕಾರಣಾಂತರಗಳಿಂದ ಲೋಕಾರ್ಪಣೆ ಕಾರ್ಯ ವಿಳಂಬವಾಗಿದೆ. ಯಾವುದೇ ಕಾರಣಕ್ಕೂ ತಡ ಮಾಡದೇ ಎರಡು ತಿಂಗಳಿನೊಳಗೆ ಶಾಸ್ತ್ರೋಕ್ತವಾಗಿ ಸಂಬಂಧಪಟ್ಟ ಗಣ್ಯರು, ಮುಖಂಡರು ಹಾಗೂ ಎಲ್ಲರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಲೋಕಾರ್ಪಣೆಗೊಳಿಸಲಾಗುವುದು’ ಎಂದರು.

‘ಈ ಸ್ಥಳದಲ್ಲಿ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡುವ ಮೂಲಕ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ರಾಜ್ಯದಲ್ಲೇ ಇತಿಹಾಸ ಹಾಗೂ ಪರಂಪರೆ ಹೊಂದಿರುವ ದೇವಾಲಯದ ಅಗತ್ಯ ಕಾಮಗಾರಿಗಳನ್ನು ಹಿಂದೆ ಕೈಗೆತ್ತಿಕೊಳ್ಳಲಾಗಿದ್ದು, ಎಲ್ಲವೂ ಮುಗಿದಿದೆ. ಈಗ ಮತ್ತೆ ಕೆಲವು ಪ್ರಮುಖ ಕಾಮಗಾರಿಗಳನ್ನು ಆರಂಭಿಸುವ ಮೂಲಕ ಭಕ್ತರಿಗೆ ಹೆಚ್ಚಿನ ಅನೂಕೂಲ ಮಾಡಿಕೊಡಲಾಗುವುದು’ ಎಂದು ಹೇಳಿದರು.

ತಹಶೀಲ್ದಾರ್‌ ಎಂ.ಜಿ. ಸಂತೋಷ್‌ಕುಮಾರ್‌, ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಧರ್ಮಶೇಖರ್‌, ಹಗ್ಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ, ಸದಸ್ಯ ಗಿರೀಶ್‌, ನಗರಸಭೆ ಉಪಾಧ್ಯಕ್ಷ ಮನೋಹರ್‌ ಮೇಸ್ತ್ರೀ, ಮುಖಂಡರಾದ ಚಂದ್ರಣ್ಣ, ನಾಗರಾಜು, ಆಗಮಿಕರಾದ ರಾಮಪ್ರಸಾದ್‌, ವರದರಾಜು, ಶ್ರೀನಿವಾಸ್‌ ಹಾಜರಿದ್ದರು.

ಅರಸೀಕೆರೆ ಹೊರವಲಯದಲ್ಲಿರುವ ಮಾಲೇಕಲ್ಲು ತಿರುಪತಿಯ ವೆಂಟಕರಮಣ ದೇವಸ್ಥಾನದ ದಾಸೋಹ ಮಂದಿರ ನಿರ್ಮಾಣದ ಕಾಮಗಾರಿಗೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಭೂಮಿ ಪೂಜೆ ನೆರವೇರಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.