ಹಾಸನ: ಹಾಸನ ಹಾಲು ಉತ್ಪಾದಕರ ಸಹಕಾರ ಒಕ್ಕೂಟವು 2024-25 ನೇ ಸಾಲಿಗೆ ₹2,800 ಕೋಟಿ ವಹಿವಾಟು ನಡೆಸುವ ಗುರಿ ಹೊಂದಿದೆ. ಡಿಸೆಂಬರ್ ಅಂತ್ಯದವರೆಗೆ ಸುಮಾರು ₹1,720 ಕೋಟಿ ವಹಿವಾಟು ನಡೆಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು.
ಇಲ್ಲಿನ ಹಾಸನ ಹಾಲು ಒಕ್ಕೂಟದ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2024-25 ರ ಸಾಲಿನಲ್ಲಿ ಒಕ್ಕೂಟವು ಪರಿವರ್ತನೆಗೆ ಕಳುಹಿಸುವ ಹಾಲಿನ ಪ್ರಮಾಣ ಹೆಚ್ಚಾಗಿದೆ ಎಂದರು.
ಪರಿವರ್ತನೆಯಾದ ಉತ್ಪನ್ನಗಳಾದ ಹಾಲಿನಪುಡಿ ಉತ್ಪಾದನಾ ವೆಚ್ಚ ಪ್ರತಿ ಕೆ.ಜಿ.ಗೆ ₹290 ಆಗಿದ್ದು, ಮಾರಾಟ ದರ ಪ್ರತಿ ಕೆ.ಜಿ.ಗೆ ₹210 ಇದೆ. ಇದರಿಂದ ಪ್ರತಿ ಕೆ.ಜಿ.ಗೆ ಸುಮಾರು ₹ 80 ನಷ್ಟ ಅನುಭವಿಸುವಂತಾಗಿದೆ. ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಇದೆ. ಆದರೂ, ವೆಚ್ಚಗಳ ಮೇಲೆ ನಿಯಂತ್ರಣ ಸಾಧಿಸಲಾಗುತ್ತಿದೆ ಎಂದು ಹೇಳಿದರು.
ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಹೆಚ್ಚಳಕ್ಕೆ ಆದ್ಯತೆ ನೀಡಿದ್ದು, ಸೆಪ್ಟೆಂಬರ್‌ನಿಂದ ಒಕ್ಕೂಟವು ಲಾಭದಲ್ಲಿ ಮುನ್ನಡೆಯುತ್ತಿದೆ. ಮಾರ್ಚ್‌ಗೆ ಅಂತ್ಯಗೊಳ್ಳುವ ಆರ್ಥಿಕ ವರ್ಷದಲ್ಲಿ ₹ 10 ಕೋಟಿ ಲಾಭ ಗಳಿಸುವ ನಿರೀಕ್ಷೆ ಇದೆ ಎಂದರು.
ಹಾಸನ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಹಾಲಿನ ಸಂಘಗಳು ಇಲ್ಲದೇ ಇರುವ ಗ್ರಾಮಗಳನ್ನು ಗುರುತಿಸಿ, ಪ್ರತಿ ವರ್ಷ ಸುಮಾರು 100 ನೂತನ ಸಂಘಗಳನ್ನು ಸ್ಥಾಪಿಸುವ ಮೂಲಕ ಮುಂದಿನ 2-3 ವರ್ಷಗಳಲ್ಲಿ ಎಲ್ಲ ಗ್ರಾಮಗಳಲ್ಲಿಯೂ ಹಾಲಿನ ಉತ್ಪಾದಕ ಸಂಘಗಳನ್ನು ಸ್ಥಾಪಿಸಲು ಒಕ್ಕೂಟದಿಂದ ವಿಶೇಷ ಯೋಜನೆ ರೂಪಿಸಿದೆ. ಈ ವರ್ಷದಲ್ಲಿ ಸುಮಾರು 20 ನೂತನ ಸಂಘಗಳನ್ನು ಸ್ಥಾಪಿಸಲಾಗಿದೆ. ಇನ್ನೂ 50 ನೂತನ ಸಂಘಗಳ ಸ್ಥಾಪನೆಗೆ ಯೋಜಿಸಲಾಗಿದೆ ಎಂದರು.
ಗ್ರಾಮೀಣ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ 90 ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ತೇರ್ಗಡೆ ಹೊಂದಿದರುವ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಸಂಘಗಳ ಸದಸ್ಯರ ಮಕ್ಕಳು ಹಾಗೂ ಪಿ.ಯು.ಸಿ. ನಂತರದ ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮುಂದುವರಿಸಿರುವ ವಿದ್ಯಾರ್ಥಿಗಳಿಗೆ ಹಾಮೂಲ್ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಯಶಸ್ವಿನಿ ಆರೋಗ್ಯ ರಕ್ಷಾ ಯೋಜನೆಗೆ ನೋಂದಣಿಯಾಗಿರುವ ಒಕ್ಕೂಟದ ವ್ಯಾಪ್ತಿಯ ಹಾಲು ಉತ್ಪಾದಕರ ಕುಟುಂಬಗಳಿಗೆ ಒಕ್ಕೂಟದಿಂದ ಸಹಾಯಧನ ನೀಡುತ್ತಿದ್ದು, ಒಕ್ಕೂಟಕ್ಕೆ ನೀಡಲಾಗಿರುವ ಗುರಿಗಳನ್ವಯ ಪ್ರಗತಿ ಸಾಧಿಸಲು ಕ್ರಮ ಕೈಗೊಳ್ಳಲಾಗುವುದು. ಸಹಾಯಧನ ಮೊತ್ತವನ್ನು ಫಲಾನುಭವಿಗಳಿಗೆ ಒಕ್ಕೂಟದ ರೈತ ಕಲ್ಯಾಣ ಟ್ರಸ್ಟ್ ವತಿಯಿಂದ ಪಾವತಿಸಲಾಗುತ್ತಿದೆ ಎಂದು ಹೇಳಿದರು.
ಒಕ್ಕೂಟದ ವ್ಯಾಪ್ತಿಯ ಸಂಘಗಳು ಸ್ವಂತ ಕಟ್ಟಡ ಹೊಂದಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಕ್ಕೂಟದಿಂದ ಕಟ್ಟಡ ನಿರ್ಮಾಣ ಅನುದಾನ ₹3 ಲಕ್ಷ ನೀಡಲಾಗುತ್ತಿದ್ದು, ಒಕ್ಕೂಟದ ವ್ಯಾಪ್ತಿಯ ಸಂಘಗಳ ದೈನಂದಿನ ವ್ಯವಹಾರ, ಹಾಲು ಶೇಖರಣೆ, ಗುಣಮಟ್ಟ ಪರೀಕ್ಷೆ ಮುಂತಾದವುಗಳನ್ನು ಕಂಪ್ಯೂಟರೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ 1,718 ಸಂಘಗಳಲ್ಲಿ ಎ.ಎಂ.ಸಿ.ಯು. ಘಟಕಗಳನ್ನು ಅಳವಡಿಸಿ, ಏಕರೂಪ ತಂತ್ರಾಂಶವನ್ನು ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದರು.
ಶಾಸಕ ಎಚ್.ಪಿ. ಸ್ವರೂಪ್, ನಗರಸಭೆ ಅಧ್ಯಕ್ಷ ಎಂ. ಚಂದ್ರೇಗೌಡ, ಜೆಡಿಎಸ್ ಆಲೂರು ತಾಲ್ಲೂಕು ಘಟಕದ ಅಧ್ಯಕ್ಷ ಮಂಜೇಗೌಡ ಉಪಸ್ಥಿತರಿದ್ದರು.
‘ಉತ್ಪಾದಕರಿಗೆ ಗರಿಷ್ಠ ಮೊತ್ತ’
ಒಕ್ಕೂಟವು ಪ್ರಸ್ತುತ ಹಾಲು ಉತ್ಪಾದಕರ ಸಂಘಗಳಿಗೆ ಪ್ರತಿ ಲೀಟರ್‌ಗೆ ₹32.17 ರಿಂದ ₹33 ಪಾವತಿಸುತ್ತಿದ್ದು ಹಾಲಿನ ಪ್ರೋತ್ಸಾಹಧನ ಪ್ರತಿ ಲೀಟರ್‌ಗೆ ₹5 ಸೇರಿ ₹37.17 ರಿಂದ ₹38 ದರ ಹಾಲು ಉತ್ಪಾದಕರಿಗೆ ದೊರೆಯುತ್ತಿದೆ. ಕೆಎಂಎಫ್‌ನ 15 ಹಾಲು ಒಕ್ಕೂಟಗಳ ಪೈಕಿ ಹಾಸನ ಹಾಲು ಒಕ್ಕೂಟವು ಉತ್ತಮ ದರ ಪಾವತಿಸುವ ಒಕ್ಕೂಟವಾಗಿದೆ ಎಂದು ರೇವಣ್ಣ ತಿಳಿಸಿದರು. ಮುಂದಿನ ದಿನಗಳಲ್ಲಿ ಒಕ್ಕೂಟದ ಲಾಭಾಂಶವನ್ನು ಗಣನೆಗೆ ತೆಗೆದುಕೊಂಡು ಹಾಲಿನ ಖರೀದಿ ದರ ಹೆಚ್ಚಳ ಮಾಡಿ ಉತ್ಪಾದಕರಿಗೆ ಪ್ರೋತ್ಸಾಹಿಸಲು ಯೋಚಿಸಲಾಗಿದೆ ಎಂದು ತಿಳಿಸಿದರು. ಸದ್ಯಕ್ಕೆ ಹವಾಮಾನ ವೈಪರೀತ್ಯದಿಂದಾಗಿ ಹಾಲಿನ ಉತ್ಪಾದನೆ ಕುಂಠಿತವಾಗಿದ್ದು ರಾಜ್ಯದಲ್ಲಿಯೂ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಒಕ್ಕೂಟದಲ್ಲಿ ಪ್ರಸ್ತುತ 1718 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ನಿತ್ಯ ಸರಾಸರಿ 13 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿದೆ ಎಂದರು.
‘ಲಿಂಗ ನಿರ್ಧಾರಿತ ಕೃತಕ ಗರ್ಭಧಾರಣೆ’
ಒಕ್ಕೂಟದಲ್ಲಿ ಪ್ರತಿ ತಿಂಗಳು ಸುಮಾರು 55ಸಾವಿರ ಕೃತಕ ಗರ್ಭಧಾರಣ ಕಾರ್ಯ ಪ್ರಗತಿಯಲ್ಲಿದೆ. ಸಮೂಹ ಕೃತಕ ಗರ್ಭಧಾರಣೆ ಕಾರ್ಯಕರ್ತರಿಗೆ ಒಕ್ಕೂಟದಿಂದ ಶೇ 50ರ ಅನುದಾನದಲ್ಲಿ ಆರೋಗ್ಯ ವಿಮಾ ಸೌಲಭ್ಯ ವಿಸ್ತರಿಸಲಾಗಿದೆ ಎಂದು ಎಚ್.ಡಿ. ರೇವಣ್ಣ ತಿಳಿಸಿದರು. ಹಾಲು ಉತ್ಪಾದಕರು ಹೆಚ್ಚು ಹೆಣ್ಣು ಕರುಗಳನ್ನು ಪಡೆಯಲು ಅವಕಾಶವಾಗುವಂತೆ ಲಿಂಗ ನಿರ್ಧಾರಿತ ವೀರ್ಯನಳಿಕೆ ಮೂಲಕ ಕೃತಕ ಗರ್ಭಧಾರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 2024-25ನೇ ರಲ್ಲಿ 1.5 ಲಕ್ಷ ಲಿಂಗ ನಿರ್ಧಾರಿತ ಕೃತಕ ಗರ್ಭಧಾರಣೆ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು. ಪ್ರತಿ ವೀರ್ಯ ನಳಿಕೆ ಬೆಲೆ ₹ 250 ಆಗಿದೆ. ಇದರಲ್ಲಿ ಒಕ್ಕೂಟದಿಂದ ₹75 ಕೆಎಂಎಫ್‌ನಿಂದ ₹75 ಅನುದಾನ ನೀಡಲಿದ್ದು ಉತ್ಪಾದಕರು ₹100 ಮಾತ್ರ ಭರಿಸಬೇಕಿದೆ. ಇದರಲ್ಲಿ ಶೇ 90 ಕ್ಕಿಂತ ಹೆಚ್ಚು ಹೆಣ್ಣು ಕರುಗಳ ಜನನವಾಗುತ್ತಿದ್ದು ಉತ್ಪಾದಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
‘ಬೆಂಗಳೂರಿನಲ್ಲೂ ಮಾರಾಟಕ್ಕೆ ಅವಕಾಶ ನೀಡಿ’
ಒಕ್ಕೂಟದ ದ್ರವರೂಪದ ಹಾಲಿಗೆ ಸೀಮಿತ ಮಾರುಕಟ್ಟೆ ಸೌಲಭ್ಯ ಇರುವುದನ್ನು ಪಶುಸಂಗೋಪನಾ ಸಚಿವರ ಗಮನಕ್ಕೆ ತರಲಾಗಿದೆ. ಒಕ್ಕೂಟದ ಬಹುದಿನಗಳ ಬೇಡಿಕೆಯಾಗಿರುವ ಬೆಂಗಳೂರು ಮಾರುಕಟ್ಟೆಯನ್ನು ಹಾಸನ ಹಾಲು ಒಕ್ಕೂಟಕ್ಕೂ ಹಂಚಿಕೆ ಮಾಡಿಕೊಡಲು ಕೋರಲಾಗಿದೆ. ಇದರ ಬಗ್ಗೆ ಸರ್ಕಾರದ ವತಿಯಿಂದ ಕ್ರಮ ಕೈಗೊಳ್ಳಬೇಕಾಗಿದೆ ಎಂದು ರೇವಣ್ಣ ತಿಳಿಸಿದರು. ದ್ರವ ರೂಪದಲ್ಲಿ ಮಾರಾಟ ಮಾಡುವ ಹಾಲಿನ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡು ಸಂಭಾವ್ಯ ಮಾರಾಟ ಹೆಚ್ಚಳ ಮೊತ್ತವನ್ನು ಪೂರ್ಣವಾಗಿ ಹಾಲು ಉತ್ಪಾದಕರಿಗೆ ವರ್ಗಾಯಿಸಲು ಸಾಧ್ಯವಿಲ್ಲ. ಹಾಗಾಗಿ ಒಕ್ಕೂಟವು ಎದುರಿಸಬಹುದಾದ ಎಲ್ಲ ಸಾಧಕ-ಬಾಧಕಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.