ಅರಸೀಕೆರೆ: ಪ್ರಸಕ್ತ ಮುಂಗಾರಿನಲ್ಲಿ ತಾಲ್ಲೂಕಿನಲ್ಲಿ ವಾಡಿಕೆಗಿಂತಲೂ ಹೆಚ್ಚು ಮಳೆ ಸುರಿದಿದ್ದು, ಬಿತ್ತನೆ ಕಾರ್ಯ ಚುರುಕು ಪಡೆದಿದೆ. ರಾಗಿ ಹಾಗೂ ಮುಸುಕಿನ ಜೋಳ ಸೇರಿ ಇತರೆ ಬೆಳೆಗಳ ಬಿತ್ತನೆಯಲ್ಲಿ ಕೃಷಿಕರು ಮಗ್ನರಾಗಿದ್ದಾರೆ.
ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನಲ್ಲಿ ವಾಡಿಕೆ ಮಳೆ 26.4 ಸೆಂ.ಮೀ. ಇದ್ದು, ವಾಸ್ತವದಲ್ಲಿ 34.9 ಸೆಂ.ಮೀ ಮಳೆಯಾಗಿದೆ. ಉತ್ತಮ ಮಳೆಯಿಂದ ರೈತರು ಸಂತಸಗೊಂಡಿದ್ದಾರೆ.
ತಾಲ್ಲೂಕಿನ 40 ಸಾವಿರ ಹೆಕ್ಟೇರ್‌ನಷ್ಟು ಪ್ರದೇಶದಲ್ಲಿ ರಾಗಿ ಬಿತ್ತನೆಯ ಗುರಿ ಹೊಂದಿದ್ದು, ಈಗಾಗಲೇ 5 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. 4,800 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬಿತ್ತನೆಯಾಗಿದೆ. ಕೆಲದಿನಗಳಲ್ಲೇ ಬಿತ್ತನೆ ಪೂರ್ಣವಾಗಲಿದ್ದು, ರೈತಾಪಿ ಸಮುದಾಯದಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿವೆ.
ಮುಸುಕಿನ ಜೋಳ ಹಾಗೂ ರಾಗಿ ಬಿತ್ತನೆಯನ್ನು ರೈತರು ಪ್ರಾರಂಭಿಸಿದ್ದು, ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ 268 ಕ್ವಿಂಟಲ್ ಮುಸುಕಿನ ಜೋಳ ಹಾಗೂ 1,750 ಕ್ವಿಂಟಲ್ ರಾಗಿ ಬಿತ್ತನೆ ಬೀಜಗಳನ್ನು ರೈತರಿಗೆ ರಿಯಾಯಿತಿ ದರಗಳಲ್ಲಿ ವಿತರಿಸಲಾಗಿದೆ. ಅಗತ್ಯಕ್ಕೆ ತಕ್ಕಷ್ಟು ಬಿತ್ತನೆ ಬೀಜಗಳನ್ನು ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ.
ಬಿತ್ತನೆ ಕಾರ್ಯಗಳನ್ನು ಪ್ರಾರಂಭಿಸಿರುವುದರಿಂದ, ಎನ್‌ಪಿಕೆಯುಕ್ತ ಕಾಂಪ್ಲೆಕ್ಸ್ ರಸಗೊಬ್ಬರಗಳನ್ನು ಬಳಕೆ ಮಾಡುವುದು ಅನುಕೂಲಕರ. ರಸಗೊಬ್ಬರಗಳ ದಾಸ್ತಾನು ಇದ್ದು, ಯಾವುದೇ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಬಿತ್ತನೆಯಾದ 30-45 ದಿನಗಳ ನಂತರದಲ್ಲಿ ಮೇಲು ಗೊಬ್ಬರವಾಗಿ ಯೂರಿಯಾ ಬಳಕೆ ಮಾಡುವುದರಿಂದ, ಯೂರಿಯಾದಲ್ಲಿನ ಸಾರಜನಕ ಅಂಶ ಗಿಡಕ್ಕೆ ನೇರವಾಗಿ ಲಭಿಸಿ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಯೂರಿಯಾ ಅತಿಯಾದ ಬಳಕೆ ಮಣ್ಣಿನ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಬೆಳೆಗಳಿಗೆ ನಿರ್ದಿಷ್ಟ ಪ್ರಮಾಣದ ರಸಗೊಬ್ಬರಗಳನ್ನು ಮಾತ್ರ ಬಳಕೆ ಮಾಡುವುದು ಉತ್ತಮ ಎಂದು ಹೇಳಿದ್ದಾರೆ.
ರಸಗೊಬ್ಬರಗಳನ್ನು ಉತ್ಪಾದಿಸುವ ಹಾಗೂ ಸರಬರಾಜು ಮಾಡುವ ಸಂಸ್ಥೆಗಳು ರೈತರಿಗೆ ಬೇಕಾಗುವ ರಸಗೊಬ್ಬರಗಳನ್ನು ಮಾತ್ರವೇ ಸರಬರಾಜು ಮಾಡುವ ಬಗ್ಗೆ ಈಗಾಗಲೇ ಇಲಾಖೆಯಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಅದಾಗ್ಯೂ ನೇರ ರಸಗೊಬ್ಬರಗಳ ಜೊತೆಯಲ್ಲಿ ಅನ್ಯ ಪರಿಕರಗಳು, ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಗಮನಕ್ಕೆ ಬರುತ್ತಿದ್ದು, ಅಂತಹ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
40 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಗುರಿ: 5 ಸಾವಿರ ಹೆಕ್ಟೇರ್ ಪೂರ್ಣ 268 ಕ್ವಿಂಟಲ್ ಮುಸುಕಿನ ಜೋಳ, 1,750 ಕ್ವಿಂಟಲ್ ರಾಗಿ ಬೀಜ ವಿತರಣೆ ಬಿತ್ತನೆಯಾದ 30–45 ದಿನಗಳ ನಂತರ ಬೆಳೆಗೆ ಯೂರಿಯಾ ನೀಡಲು ಸಲಹೆ
ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ರಸಗೊಬ್ಬರಗಳನ್ನು ಸಕಾಲದಲ್ಲಿ ಪೂರೈಕೆ ಮಾಡಬೇಕು. ಈ ಹಿಂದೆ ರಾಗಿ ಬಿತ್ತನೆ ಬೀಜಗಳ ಬಗ್ಗೆ ಸಾಕಷ್ಟು ದೂರುಗಳಿದ್ದು ಪುನರಾರ್ವತನೆ ಆಗದಂತೆ ಸರ್ಕಾರ ಕ್ರಮಕೈಕೊಳ್ಳಬೇಕುಶಿವಸ್ವಾಮಿ ಗಂಡಸಿ ರೈತ
ಸಮರ್ಪಕ ಗೊಬ್ಬರ ವಿತರಣೆಗೆ ಸೂಚನೆ ‘ತಾಲ್ಲೂಕಿನ ಎಲ್ಲ ಚಿಲ್ಲರೆ ಹಾಗೂ ಸಗಟು ರಸಗೊಬ್ಬರ ಮಾರಾಟಗಾರರು ರೈತರಿಗೆ ಸಕಾಲದಲ್ಲಿ ರಸಗೊಬ್ಬರಗಳು ಲಭ್ಯವಾಗುವಂತೆ ವಿವಿಧ ರಸಗೊಬ್ಬರಗಳನ್ನು ತಮ್ಮ ಮಾರಾಟ ಮಳಿಗೆಗಳಲ್ಲಿ ದಾಸ್ತಾನು ಮಾಡಿ ರೈತರಿಗೆ ವಿತರಿಸಲು ಸೂಚಿಸಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್ ತಿಳಿಸಿದ್ದಾರೆ. ‘ಕೃಷಿ ಇಲಾಖೆಯಿಂದ ಅಧಿಕೃತವಾಗಿ ರಸಗೊಬ್ಬರ ಮಾರಾಟ ಪರವಾನಗಿ ಹೊಂದಿ ಸಕಾಲದಲ್ಲಿ ರಸಗೊಬ್ಬರಗಳನ್ನು ದಾಸ್ತಾನು ಮಾಡಿ ನಿಯಮಾನುಸಾರವಾಗಿ ರೈತರಿಗೆ ಮಾರಾಟ ಮಾಡದೇ ಅಸಹಕಾರವನ್ನು ತೋರುವ ಮಾರಾಟಗಾರರ ಪರವಾನಗಿ ರದ್ದುಪಡಿಸುವ ಸಾಧ್ಯತೆ ಇದೆ’ ಎಂದು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.