ADVERTISEMENT

ಹಾಸನದಲ್ಲಿ ಮುಂಗಾರು ಮಳೆ ಅಬ್ಬರ

ಬೀದಿಬದಿ ತರಕಾರಿ ವ್ಯಾಪಾರಿಗಳಿಗೆ ಅಡ್ಡಿ, ಅನ್ನದಾತರ ಮೊಗದಲ್ಲಿ ಸಂತಸ

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 12:41 IST
Last Updated 16 ಜೂನ್ 2021, 12:41 IST
ಹಾಸನದ ಎಂ.ಜಿ ರಸ್ತೆಯಲ್ಲಿ ಮಳೆಯ ನಡುವೆಯೇ ಗ್ರಾಹಕರು ತರಕಾರಿ ಖರೀದಿಸಿದರು.
ಹಾಸನದ ಎಂ.ಜಿ ರಸ್ತೆಯಲ್ಲಿ ಮಳೆಯ ನಡುವೆಯೇ ಗ್ರಾಹಕರು ತರಕಾರಿ ಖರೀದಿಸಿದರು.   

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಬುಧವಾರವೂ ಜೋರು ಮಳೆಯಾಗಿದೆ. ಹಾಸನ, ಸಕಲೇಶಪುರ, ಹೆತ್ತೂರು, ಯಸಳೂರು ಭಾಗದಲ್ಲಿ ಇಡೀ ದಿನ ಆಗಾಗ್ಗೆ ಬಿಡುವು ನೀಡಿ ಮಳೆಸುರಿದಿದೆ.

ಹಾಸನ ನಗರ ಹಾಗೂ ಸುತ್ತಮುತ್ತಲೂ ಜೋರು ಮಳೆಯಾಗಿದೆ. ಸಂಜೆ ಬಳಿಕ ಸ್ವಲ್ಪ ಬಿಡುವು ನೀಡಿತು. ಅರಸೀಕೆರೆ, ಚನ್ನರಾಯಪಟ್ಟಣ, ಆಲೂರು, ಬೇಲೂರು, ಕೊಣನೂರಿನಲ್ಲಿ ತುಂತುರು ಮಳೆಯಾಗಿದೆ. ಹಿರೀಸಾವೆ, ಅರಕಲಗೂಡಿನಲ್ಲಿ ಮೋಡ ಮುಸುಕಿದ ವಾತಾವರಣ ಇದ್ದರೆ, ನುಗ್ಗೇಹಳ್ಳಿಯಲ್ಲಿ ಧಾರಾಕಾರ ಮಳೆಯಾಗಿದೆ.

ಕೋವಿಡ್ ಕಾರಣದಿಂದಾಗಿ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12ರವರೆಗೆ ಅವಕಾಶ ನೀಡಲಾಗಿತ್ತು. ಮಳೆಯ ಕಾರಣದಿಂದಾಗಿ ಗ್ರಾಹಕರು, ರೈತರು ಹಾಗೂ ಬೀದಿಬದಿ ತರಕಾರಿ ವ್ಯಾಪಾರಿಗಳಿಗೆ ಅಡ್ಡಿ ಉಂಟಾಯಿತು. ಮಳೆಯಲ್ಲಿಯೇ ಹಲವರು ತರಕಾರಿ, ಹೂವು, ಹಣ್ಣು, ಮಾಂಸ, ಮೀನು ಖರೀದಿಸಿದರು.

ADVERTISEMENT

ಜಲಾನಯನ ಪ್ರದೇಶಗಳಾದ ಸಕಲೇಶಪುರ ಮತ್ತು ಮೂಡಿಗೆರೆ ಭಾಗದಲ್ಲಿ ಮಳೆ ಆಗುತ್ತಿರುವುದರಿಂದ ಹೇಮಾವತಿ ಜಲಾಶಯದ ಒಳ ಹರಿವು ಹೆಚ್ಚಾಗಿದೆ. 2,922 ಅಡಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಬುಧವಾರ 2881.35 ಅಡಿ ನೀರು ಸಂಗಹ್ರವಾಗಿದ್ದು, ಒಳ ಹರಿವು 5091 ಕ್ಯುಸೆಕ್‌ ಇದೆ. ಹೊರ ಹರಿವು 250 ಕ್ಯುಸೆಕ್ ಇದೆ.‌
ಜಲಾಶಯದಲ್ಲಿ 10.216 ಟಿಎಂಸಿ ನೀರಿದೆ.‌

ಸತತ ನಾಲ್ಕು ದಿನಗಳಿಂದ ಮುಂಗಾರು ಬಿರುಸುಗೊಂಡಿರುವುದರಿಂದ ಅನ್ನದಾತರ ಮೊಗದಲ್ಲಿ ಸಂತಸ ಮೂಡಿದೆ. ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.

ಅರಕಲಗೂಡು ತಾಲ್ಲೂಕಿನ ಮಲ್ಲಿಪಟ್ಟಣ, ದೊಡ್ಡಬೆಮ್ಮತ್ತಿ ಭಾಗದಲ್ಲಿ ಬಿತ್ತಿದ್ದ ಮುಸುಕಿನಜೋಳ
ಮೊಳೆಕೆಯೊಡೆದು ನೆಲೆ ಬಿಟ್ಟು ಮೇಲೇಳುತ್ತಿದೆ. ಕೊಣನೂರು ಮತ್ತು ರಾಮನಾಥಪುರ ಹೋಬಳಿ
ಭಾಗದ ಪ್ರಮುಖ ವಾಣಿಜ್ಯ ಬೆಳೆ ತಂಬಾಕಿನ ಕಡೆ ಹಂತದ ನಾಟಿ ಕಾರ್ಯ ಚುರುಕುಗೊಂಡಿದೆ.

ಸಕಲೇಶಪುರ ತಾಲ್ಲೂಕಿನಲ್ಲಿ ಇಡೀ ದಿನ ಬಿಡುವು ನೀಡದ ಮಳೆ ಸುರಿದಿದ್ದು, ಜನಜೀವನ
ಅಸ್ತವ್ಯಸ್ತಗೊಂಡಿದೆ. ನಿರಂತರ ಮಳೆ ಹಾಗೂ ಹೆಚ್ಚಿರುವ ಚಳಿಯಿಂದಾಗಿ ಜನರು ಮನೆಯಿಂದ
ಹೊರಬಾರದಂತಾಗಿದೆ. ಕಾಫಿ ತೋಟಗಳ ಕಾರ್ಮಿಕರಿಗೆ ರಜೆ ಘೋಷಿಸಲಾಗಿದೆ. ಗಾಳಿ ಮಳೆಗೆ
ಅಲ್ಲಲ್ಲಿ ಮರಗಳು ಉರುಳಿ ಬಿದ್ದಿವೆ.

ಹಾನಬಾಳ್‌ ಹೋಬಳಿಯ ಪಶ್ಚಿಮಘಟ್ಟದಂಚಿನ ಗ್ರಾಮವಾದ ಅಚ್ಚನಹಳ್ಳಿ, ಹೆತ್ತೂರು ಹೋಬಳಿ
ಬೊಮ್ಮನಕೆರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮೂರು ದಿನಗಳಿಂದ ವಿದ್ಯುತ್‌ ವ್ಯತ್ಯಯವಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.