ADVERTISEMENT

ನಾಲ್ವರಿಗೆ ಕೋವಿಡ್‌, ವ್ಯಕ್ತಿ ಸಾವು

715ಕ್ಕೆ ಏರಿದ ಸೋಂಕಿತರ ಸಂಖ್ಯೆ, 221 ಸಕ್ರಿಯ

​ಪ್ರಜಾವಾಣಿ ವಾರ್ತೆ
Published 14 ಜುಲೈ 2020, 14:53 IST
Last Updated 14 ಜುಲೈ 2020, 14:53 IST

ಹಾಸನ: ಜಿಲ್ಲೆಯಲ್ಲಿ ಹೊಸದಾಗಿ ಮಂಗಳವಾರ ನಾಲ್ಕು ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 715 ಕ್ಕೆ ಏರಿಕೆಯಾಗಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಈವರೆಗೆ 472 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 221 ತಲುಪಿದೆ. 16 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದುವರೆಗೆ 22 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಾಸನ ತಾಲ್ಲೂಕಿನ 48 ವರ್ಷ ವ್ಯಕ್ತಿ, ಜುಲೈ 10ರಂದು ಉಸಿರಾಟದ
ಸಮಸ್ಯೆಯಿಂದ ಹಿಮ್ಸ್‌ಗೆ ದಾಖಲಾಗಿದ್ದರು. ಎರಡು ವರ್ಷಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಸರ್ಕಾರದ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ತಿಳಿಸಿದರು.

ADVERTISEMENT

ಹೊಸದಾಗಿ ಪತ್ತೆಯಾದ ನಾಲ್ಕು ಪ್ರಕರಣಗಳಲ್ಲಿ ಹಾಸನ ತಾಲ್ಲೂಕಿನ ಮೂವರು ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿಗೆ ಒಬ್ಬರು ಸೇರಿದ್ದಾರೆ. ಬೆಂಗಳೂರು ಪ್ರಯಾಣ ಹಿನ್ನೆಲೆ, ಸೋಂಕಿತರ ಸಂಪರ್ಕ, ಶೀತ ಜ್ವರ ಮಾದರಿಯ ಅನಾರೋಗ್ಯದಿಂದ ಸೋಂಕು ತಗುಲಿದೆ ಎಂದರು.

ಕೋವಿಡ್ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ತಡೆಗಟ್ಟುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.