ಹಾಸನ: ಸುಮಾರು 900 ವರ್ಷಗಳ ಇತಿಹಾಸ ಹೊಂದಿರುವ ತಾಲ್ಲೂಕಿನ ನಂಜೆದೇವರ ಕಾವಲು ಗ್ರಾಮದ ನಂಜುಂಡೇಶ್ವರ ಸ್ವಾಮಿ ದೇವಾಲಯಕ್ಕೆ ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆಯನ್ನು ಶಾಸಕ ಸ್ವರೂಪ ಪ್ರಕಾಶ್ ಶನಿವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಐತಿಹಾಸಿಕ ದೇವಸ್ಥಾನ ಇರುವುದು ಸೌಭಾಗ್ಯ. ಅದನ್ನು ಉಳಿಸಿ ಬೆಳೆಸುವುದು ಎಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಬಂದು ಕೇಳಿದ ಕೂಡಲೇ ಒಪ್ಪಿಗೆ ನೀಡಿ, ಶೀಘ್ರವಾಗಿ ಕಾಮಗಾರಿ ಮುಗಿಸಿದ್ದು, ಭಕ್ತರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.
ನಮ್ಮ ತಂದೆಯ ಕಾಲದಿಂದಲೂ ದೇವಾಲಯಗಳ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದೇವೆ. ದೇವಾಲಯಕ್ಕೆ ಇನ್ನೂ ಹೆಚ್ಚು ಮೂಲಸೌಕರ್ಯಗಳ ಅಗತ್ಯವಿದ್ದು, ಎಲ್ಲವನ್ನೂ ಪೂರೈಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಈ ಹಿಂದೆ ನೀಡಿದ್ದ ₹ 10 ಕೋಟಿ ವಿಶೇಷ ಅನುದಾನದ ಪೈಕಿ ₹ 1 ಕೋಟಿಯನ್ನು ಈ ರಸ್ತೆಗೆ ಬಳಕೆ ಮಾಡಲಾಗಿದೆ. ದೇವರ ಕೃಪೆಯಿಂದ ಕೇವಲ 15 ದಿನಗಳಲ್ಲಿ ರಸ್ತೆ ಕಾಮಗಾರಿ ಮುಗಿಸಿದ್ದೇವೆ. ಜನಸೇವೆ ಮಾಡುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ. ಕಷ್ಟ ಎಂದು ಬಂದ ಎಲ್ಲ ವರ್ಗದ ಜನರು, ರೈತರು, ವಿದ್ಯಾರ್ಥಿಗಳು ಎಲ್ಲರಿಗೂ ಕೈಲಾದಷ್ಟು ಸಹಾಯ ಮಾಡಿದ್ದೇನೆ ಎಂದರು.
ಇದೀಗ ನಂಜುಂಡೇಶ್ವರ ಸ್ವಾಮಿ ದೇವಾಲಯದ ಪಕ್ಕದಲ್ಲಿ ಪಾರ್ವತಮ್ಮ ಅವರ ದೇವಾಲಯ ನಿರ್ಮಾಣದ ಬಗ್ಗೆಯೂ ಗಮನಕ್ಕೆ ಬಂದಿದ್ದು, ಅತಿ ಶೀಘ್ರ ಹೊಸದಾಗಿ ಪಾರ್ವತಮ್ಮ ದೇವಾಲಯ ನಿರ್ಮಾಣಕ್ಕೆ ಮುಂದಿನ ಅನುದಾನದಲ್ಲಿ ₹ 5 ಕೋಟಿ ನೀಡುವುದಾಗಿ ಭರವಸೆ ನೀಡಿದರು.
108 ಅಡಿ ಶಿವನ ವಿಗ್ರಹ ಸ್ಥಾಪನೆ ಬಗ್ಗೆಯೂ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಅದನ್ನು ಕೂಡ ಶೀಘ್ರವಾಗಿ ಮಾಡಲಾಗುವುದು ಎಂದರು.
ಜೆಡಿಎಸ್ ಮುಖಂಡ ಕಣದಹಳ್ಳಿ ಮಂಜೇಗೌಡ ಮಾತನಾಡಿ, ಹಲವು ದಿನಗಳಿಂದ ರಸ್ತೆ ಸಮಸ್ಯೆಯಿಂದ ಬಳಲುತ್ತಿದ್ದ ನಂಜುಂಡೇಶ್ವರನ ಭಕ್ತರಿಗೆ ದೇವರ ಕೃಪೆಯಿಂದ ಶಾಸಕ ಸ್ವರೂಪ್ ಪ್ರಕಾಶ್ ಅವರ ನೇತೃತ್ವದಲ್ಲಿ ಉತ್ತಮ ರಸ್ತೆಯಾಗಿದೆ. ಇದನ್ನು ಭಕ್ತರು ಬಳಕೆ ಮಾಡಿಕೊಳ್ಳಬೇಕು. ಶೌಚಾಲಯ, ಕುಡಿಯುವ ನೀರು, ಊಟದ ಕೊಠಡಿ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಒದಗಿಸಲಾಗಿದೆ ಎಂದರು.
ಮುಖಂಡ ಮಂಜು ಮಾತನಾಡಿ, ನಂಜುಂಡೇಶ್ವರ ಸ್ವಾಮಿ ದೇವಾಲಯ ಹಾಸನ ಜಿಲ್ಲೆ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಭಕ್ತರನ್ನು ಹೊಂದಿದೆ. 25 ವರ್ಷಗಳಿಂದಲೂ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದರೂ ಯಾರೊಬ್ಬರು ಸ್ಪಂದಿಸಲಿಲ್ಲ. ಮೊದಲ ಬಾರಿಗೆ ಶಾಸಕರಾದ ಸ್ವರೂಪ್ ರಸ್ತೆ ಮಾಡಿಕೊಟ್ಟಿದ್ದು ಸಂತಸ ತಂದಿದೆ ಎಂದರು.
ನಂಜೇದೇವರ ಕಾವಲು, ಸೋಂಪುರ, ಕಿಂಡೀಪುರ, ಮುಗಳಕೊಪ್ಪಲು ಹಾಗೂ ಸುತ್ತಲಿನ ಗ್ರಾಮಸ್ಥರು, ಜೆಡಿಎಸ್ ಮುಖಂಡರು ಮತ್ತು ದೇವಾಲಯದ ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.