ಹಾಸನ: ರೈತರು ನೈಸರ್ಗಿಕ ಸಂಪನ್ಮೂಲಗಳನ್ನು ಅವಶ್ಯಕತೆಗೆ ಅನುಗುಣವಾಗಿ ಬಳಸಿ, ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಯೋಗೇಶ್ ಹೇಳಿದರು.
ನಗರದ ಹೊರವಲಯದ ಆರ್.ಜಿ. ಸಭಾಂಗಣದಲ್ಲಿ ಬುಧವಾರ ಮಹಿಂದ್ರಾ ಟ್ರ‍್ಯಾಕ್ಟರ್ ವತಿಯಿಂದ ರೈತ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಅನ್ನದಾತನಿಗೆ ಸತ್ಕಾರ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೃಷಿಗೆ ಪ್ರಮುಖವಾಗಿ ಬೇಕಾಗಿರುವುದು ಮಣ್ಣು. ಮಣ್ಣು ಮತ್ತು ರೈತನ ನಡುವೆ ಅವಿನಾಭಾವ ಸಂಬಂಧವಿದೆ. ಅದೇ ರೀತಿ ನೀರು ಕೂಡ ಅವಶ್ಯಕ. ಹಾಗಾಗಿ ಮಣ್ಣು ಮತ್ತು ನೀರನ್ನು ಮಿತವಾಗಿ ಬಳಸಿ ಸಂರಕ್ಷಣೆ ಮಾಡಬೇಕು. ಮಣ್ಣು, ನೀರು ಮತ್ತು ಗಾಳಿ ಈಗಾಗಲೇ ಸಾಕಷ್ಟು ಕಲುಷಿತಗೊಂಡಿವೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಲ್ಲಿರುವ ಯೋಜನೆಗಳನ್ನು ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ರೈತ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾನೆ. ಕಷ್ಟಪಟ್ಟು ಬೆಳೆ ಬೆಳೆದರೂ ಕೆಲವೊಮ್ಮೆ ಸರಿಯಾದ ಬೆಲೆ ಸಿಗುವುದಿಲ್ಲ.
ಕೆಲವೊಮ್ಮ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಆಗಬಹುದು. ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲಸ
ಮಾಡಿದ್ದೇನೆ. ಅಲ್ಲಿ ಅಡಿಕೆ ಪ್ರಮುಖ ವಾಣಿಜ್ಯ ಬೆಳೆ. ಈ ಎರಡು ಜಿಲ್ಲೆಗಳಲ್ಲಿ ಅಡಿಕೆ ಬೆಳೆಗಾರರು ಪ್ರಬಲವಾದ ಸಂಘಟನೆ ಮಾಡಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೆ ತಕ್ಷಣವೇ ಸರ್ಕಾರದ ಮಟ್ಟದಲ್ಲಿ ಒತ್ತಡ ತಂದು ನಷ್ಟ ಆಗದ ರೀತಿ ನೋಡಿಕೊಳ್ಳುತ್ತಾರೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಬಹುತೇಕ ಕಡೆ ತೆಂಗು ಬೆಳೆಯಲಾಗುತ್ತದೆ. ಅನೇಕ ಬಾರಿ ಕೊಬ್ಬರಿ ಬೆಲೆ ಕುಸಿತವಾಗಿದೆ. ಆದರೆ, ತೆಂಗು ಬೆಳೆಗಾರರ ಸಮಸ್ಯೆಗಳಿಗಾಗಿಯೇ ಹೋರಾಟ ಮಾಡಲು ಯಾವುದೇ ಸಂಘಟನೆ ಇಲ್ಲ. ಅದೇ ರೀತಿ ಆಲೂಗಡ್ಡೆ ಬೆಳೆ ದರ ಕುಸಿದರೂ ಕೇಳುವವರೂ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮಲ್ಲಿ ಭಾಗವಹಿಸಿದ್ದ ಎಲ್ಲಾ ರೈತರನ್ನು ಸನ್ಮಾನಿಸಿ ಪ್ರಮಾಣ ಪತ್ರ ನೀಡಲಾಯಿತು. ಮಧುರ ಗೀತೆಗಳ ಗಾಯನದ ಮೂಲಕ ರೋಹನ್ ಐಯರ್ ಪ್ರೇಕ್ಷಕರನ್ನು ರಂಜಿಸಿದರು.
ಜಂಟಿ ಕೃಷಿ ನಿರ್ದೇಶಕ ಕೆ.ಎಚ್. ರವಿ, ಕಾರ್ಯಕ್ರಮ ಆಯೋಜಕ ರಘು ಗೌಡ, ಮಹಿಂದ್ರಾ ಏರಿಯಾ ಮ್ಯಾನೇಜರ್
ರಾಘವೇಂದ್ರ, ಅಟ್ಟಾವರ ಶೇಷಪ್ಪ, ಮಾನವ ಹಕ್ಕುಗಳ ವೇದಿಕೆಯ ಜಯರಾಂ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.