ಹಾಸನ: ಬಿಜೆಪಿ- ಜೆಡಿಎಸ್ ನಡುವೆ ಸಮನ್ವಯದ ಕೊರತೆ ಇಲ್ಲ. ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಬಹಿರಂಗವಾಗಲಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಭಾನುವಾರ ಹಾಸನಾಂಬ ದೇವಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಚುನಾವಣೆಯಲ್ಲಿ ಯಾವುದೇ ಲೋಪವಾಗದಂತೆ ಮೈತ್ರಿ ಧರ್ಮವನ್ನು ಪಾಲಿಸಲಾಗುವುದು. ಚುನಾವಣಾ ಪ್ರಚಾರಕ್ಕೆ ಬಿಜೆಪಿ ಎಲ್ಲ ನಾಯಕರು ಬರಲಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಮೂರು ಉಪಚುನಾವಣೆಗಳ ದಿನಾಂಕ ಘೋಷಣೆಯಾಗಿ ನಾಮಪತ್ರ ಸಲ್ಲಿಕೆ ಮುಗಿದಿದೆ. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ದೇಶದ ಗಮನ ಸೆಳೆದಿದ್ದು, ಇಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲ್ಲುವುದು ನಿಶ್ಚಿತ. ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದ ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಲಿದ್ದು, ರಾಜ್ಯದ ರಾಜಕೀಯ ಬದಲಾವಣೆಗೆ ದಿಕ್ಸೂಚಿ ಆಗಲಿದೆ ಎಂದರು.
ಕುಮಾರಸ್ವಾಮಿ ಕೇಂದ್ರ ಸಚಿವರಾಗಿ ರಾಜಕೀಯ ಮಾಡುತ್ತಾರೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಮಾಡುವ ಕೆಲಸದ ಲೆಕ್ಕ ಕೇಳುವುದು ಪ್ರಧಾನಿ. ಇವರಿಗೆ ನಾನು ಏನನ್ನೂ ಹೇಳುವ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆ ಅನಾಹುತ ಸಂಭವಿಸಿದೆ. ಬೆಂಗಳೂರು ನಗರದಲ್ಲಿಯೂ ಅವಾಂತರ ಸೃಷ್ಟಿಯಾಗಿದ್ದು. ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ರೈತರಿಗೆ ಪರಿಹಾರ ವಿತರಣೆಯಾಗಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕು. ರಾಜ್ಯದಲ್ಲಿ ರೈತರ ಬದುಕು ದಾರುಣ ಸ್ಥಿತಿಗೆ ತಲುಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸಚಿವರೇ ಹೇಳುವಂತೆ ರಾಜ್ಯದಲ್ಲಿ 80ಸಾವಿರದಿಂದ ಒಂದು ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ನಷ್ಟ ಸಂಭವಿಸಿದೆ. ಗೃಹ ಸಚಿವರೂ ಈ ಬಗ್ಗೆ ಮಾತನಾಡಿದ್ದಾರೆ. ದ್ರಾಕ್ಷಿ, ದಾಳಿಂಬೆ, ಮೆಣಸಿನ ಕಾಯಿ, ಕಾಫಿ ಸೇರಿದಂತೆ ಅನೇಕ ಬೆಳೆ ನಷ್ಟವಾಗಿದೆ. ಸಮರ್ಪಕ ಪರಿಹಾರ ಕೊಡದೇ, ರಾಜ್ಯ ಸರ್ಕಾರದ ಸಚಿವರು ಉಪಚುನಾವಣೆಗಳ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದು, ಪ್ರತಿ ಕ್ಷೇತ್ರಕ್ಕೆ 8–9 ಮಂತ್ರಿಗಳು ನಿಯೋಜನೆಗೊಂಡಿದ್ದಾರೆ. ಆದರೆ, ಮಳೆ ಅನಾಹುತ ಪರಿಶೀಲನೆಗೆ ಯಾವೊಬ್ಬ ಸಚಿವರು ನಿಯೋಜನೆಗೊಂಡಿಲ್ಲ. ರೈತರಿಗೆ ಪರಿಹಾರ ಒದಗಿಸುವಲ್ಲಿ ಯಾವುದೇ ಕ್ರಮ ಕೈಗೊಳ್ಳುತ್ತಿರುವುದು ಕಾಣುತ್ತಿಲ್ಲ ಎಂದು ದೂರಿದರು.
‘ಸರ್ಕಾರ ರೈತರ ಆತ್ಮಹತ್ಯೆ ಪ್ರಕರಣಗಳನ್ನು ತಡೆಯಬೇಕು ಕೇವಲ ವಿಡಿಯೋ ಕಾನ್ಫರೆನ್ಸ್ ಮಾಡಿದರೆ ಸಾಲದು. ಜಿಲ್ಲೆಗೆ ಭೇಟಿ ನೀಡಿ ಕುಂದುಕೊರತೆಗಳನ್ನು ಆಲಿಸಿ, ರೈತರಿಗೆ ಮನೋಬಲ ತುಂಬುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಶಾಸಕ ಸ್ವರೂಪ್ ಪ್ರಕಾಶ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್. ಲಿಂಗೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ, ಮುಖಂಡರಾದ ಸತ್ಯನಾರಾಯಣ ಹಾಜರಿದ್ದರು.
ಹಾಸನಾಂಬ ದರ್ಶನ ಪಡೆದ ಎಚ್‍ಡಿಕೆ 80ಸಾವಿರದಿಂದ 1ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ನಷ್ಟ
ಕೇಂದ್ರದತ್ತ ಬೊಟ್ಟು: ಎಷ್ಟು ಸರಿ? ಕೇಂದ್ರ ಸರ್ಕಾರದಿಂದ ಕೊಟ್ಟ ಅನುದಾನ ಬಳಸಿಕೊಳ್ಳದೇ ಏನೇನೋ ಹೇಳಿದರೆ ಆಗುವುದಿಲ್ಲ. ಬರೀ ಮಾತನಾಡಿಕೊಂಡು ಕುಳಿತರೆ ಸಮಸ್ಯೆ ಬಗೆಹರಿಯುವುದಿಲ್ಲ. ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ ಎಂದು ಸಿದ್ದರಾಮಯ್ಯ ಅವರೇ ಹಲವು ಬಾರಿ ಹೇಳಿದ್ದಾರೆ. ಆ ಮಾತು ಅವರಿಗೆ ಅನ್ವಯ ಆಗುತ್ತದೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದರು. ಜಿಎಸ್‌ಟಿ ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಸರ್ಕಾರ ಮಾಡುತ್ತಿರುವ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಜಿಎಸ್‌ಟಿ ಹಂಚಿಕೆ ವಿಚಾರ ಯುಪಿಎ ಸರ್ಕಾರದ ಅವಧಿಯಲ್ಲಿಯೇ ಆಗಿದೆ. ಮನಮೋಹನ್ ಸಿಂಗ್ ಚಿದಂಬರಂ ಅವರ ಕಾಲದಲ್ಲಿಯೇ ಆಗಿದ್ದು ಆಗ ಈ ಸಮಸ್ಯೆ ಅವರಿಗೆ ಅರಿವಾಗಲಿಲ್ಲವೇ? ಈಗ ಕೇಂದ್ರ ಸರ್ಕಾರವನ್ನು ಏಕೆ ಪ್ರಶ್ನಿಸುತ್ತಿದ್ದಾರೆ ಎಂದು ದೂರಿದರು. ನಾನು ಮುಖ್ಯಮಂತ್ರಿ ಆಗಿದ್ದ ವೇಳೆ ರಾಜ್ಯದಲ್ಲಿನ ತೆರಿಗೆ ಹಣದಲ್ಲಿಯೇ ಸಾವಿರಾರು ಕೋಟಿ ರೂಪಾಯಿ ರೈತರ ಸಾಲಮನ್ನಾ ಮಾಡಿದ್ದೆ. ಸರಿಯಾದ ಆಡಳಿತ ನಡೆಸದೇ ಇವರು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕುಟುಂಬ ಸಮೇತ ಹಾಸನಾಂಬೆ ದರ್ಶನ ವರ್ಷಕ್ಕೊಮ್ಮೆ ದರ್ಶನ ಭಾಗ್ಯ ಕಲ್ಪಿಸುವ ಹಾಸನಾಂಬೆ ದೇವಿ ನಾಡಿನ ಜನತೆಗೆ ಹಾಗೂ ರೈತರಿಗೆ ಉತ್ತಮ ಜೀವನ ಕರುಣಿಸಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಪತ್ನಿ ಸೊಸೆ ಹಾಗೂ ಮೊಮ್ಮಗನ ಜೊತೆಗೆ ಹಾಸನಾಂಬೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜಿಲ್ಲಾಡಳಿತದಿಂದ ಈ ಬಾರಿಯ ಹಾಸನಾಂಬ ದರ್ಶನೋತ್ಸವವನ್ನು ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿದ್ದು ಬರುವ ಭಕ್ತಾದಿಗಳಿಗೆ ಉತ್ತಮ ಸೌಲಭ್ಯ ಒದಗಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವೆ ಎಂದರು. ಹಾಸನಾಂಬ ತಾಯಿಯ ಬಗ್ಗೆ ಇತಿಹಾಸ ಹೇಳುತ್ತದೆ. ಪವಾಡ ಇರುವ ಬಗ್ಗೆ ನಾವು ಚಿಕ್ಕವರಾಗಿದ್ದಾಗಿಂದ ಗಮನಿಸಿದ್ದೇವೆ. ಆಗ ಒಂದೂವರೆ ತಿಂಗಳು ಜಾತ್ರೆ ನಡೆಯುತ್ತಿತ್ತು ಎಂದು ಸ್ಮರಿಸಿದರು. ನನ್ನ ಮಗ ಎರಡು ಚುನಾವಣೆಗಳಲ್ಲಿ ಪರಾಜಿತನಾಗಿದ್ದು ಈ ಬಾರಿಯ ಉಪಚುನಾವಣೆಯಲ್ಲಿ ಹಾಸನಾಂಬೆ ತಾಯಿ ಆಶೀರ್ವಾದ ಕರುಣಿಸಲಿ ಎಂದು ಪ್ರಾರ್ಥನೆ ಮಾಡಿರುವುದಾಗಿ ಕುಮಾರಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.