ADVERTISEMENT

ಹಾಸನ ನಗರಸಭೆ ಅಧ್ಯಕ್ಷ ಸ್ಥಾನ: ಏ.28 ಕ್ಕೆ ಅವಿಶ್ವಾಸ ನಿರ್ಣಯ ಮಂಡನೆ

ನಗರಸಭೆ ಅಧ್ಯಕ್ಷ ಸ್ಥಾನ: ಪಟ್ಟು ಸಡಿಲಿಸದ ಜೆಡಿಎಸ್‌ ನಾಯಕರು

ಚಿದಂಬರಪ್ರಸಾದ್
Published 23 ಏಪ್ರಿಲ್ 2025, 5:00 IST
Last Updated 23 ಏಪ್ರಿಲ್ 2025, 5:00 IST
ಹಾಸನ ನಗರಸಭೆ ಕಚೇರಿ
ಹಾಸನ ನಗರಸಭೆ ಕಚೇರಿ   

ಹಾಸನ: ಇಲ್ಲಿನ ನಗರಸಭೆ ಅಧ್ಯಕ್ಷರನ್ನು ಬದಲಾಯಿಸುವ ನಿರ್ಧಾರ ಮಾಡಿರುವ ಜೆಡಿಎಸ್ ನಾಯಕರು, ಇದೀಗ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದಾರೆ. ಇದಕ್ಕಾಗಿ ಏ.28 ರಂದು ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದೆ.

ಆಗಸ್ಟ್‌ನಲ್ಲಿ ನಡೆದ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆಯಲ್ಲಿ 34 ಮತಗಳನ್ನು ಪಡೆಯುವ ಮೂಲಕ ಜೆಡಿಎಸ್‌ನ ಎಂ.ಚಂದ್ರೇಗೌಡ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಆದರೆ, ಆರು ತಿಂಗಳ ನಂತರ ರಾಜೀನಾಮೆ ನೀಡುವಂತೆ ಜೆಡಿಎಸ್ ನಾಯಕರು ಸೂಚನೆ ನೀಡಿದ್ದು, ಅದನ್ನು ಚಂದ್ರೇಗೌಡ ನಿರಾಕರಿಸುತ್ತಲೇ ಬಂದಿದ್ದಾರೆ. ಅಧ್ಯಕ್ಷ ಸ್ಥಾನ ಬಿಟ್ಟುಕೊಡದ ಚಂದ್ರೇಗೌಡರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಜೆಡಿಎಸ್ ನಾಯಕ ಎಚ್‌.ಡಿ. ರೇವಣ್ಣ ಸೂಚನೆ ನೀಡಿದ್ದು, ಅದರಂತೆ ವಿಶೇಷ ಸಾಮಾನ್ಯ ಸಭೆ ಕರೆಯಲಾಗಿದೆ.

ಜೆಡಿಎಸ್‌ನ 17, ಬಿಜೆಪಿಯ 14, ಕಾಂಗ್ರೆಸ್‌ ಹಾಗೂ ಪಕ್ಷೇತರ ತಲಾ ಇಬ್ಬರು ಸದಸ್ಯರು ಸೇರಿದಂತೆ ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದಾರೆ. ಸಂಸದ ಶ್ರೇಯಸ್‌ ಪಟೇಲ್‌, ಶಾಸಕ ಸ್ವರೂಪ್‌ ಪ್ರಕಾಶ್‌, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್‌ ರೇವಣ್ಣ ಅವರಿಗೂ ಮತ ಹಾಕಲು ಅವಕಾಶವಿದೆ. ಒಟ್ಟು 38 ಮತಗಳಾಗಲಿದ್ದು, ಯಾರು ಗೆಲುವು ಸಾಧಿಸಲಿದ್ದಾರೆ ಎನ್ನುವ ಕುತೂಹಲ ಮನೆ ಮಾಡಿದೆ.

ADVERTISEMENT

ಈ ವಿಷಯದಲ್ಲಿ ಕಾಂಗ್ರೆಸ್ ತಟಸ್ಥ ನಿಲುವು ತಳೆದಿದ್ದು, ಸಂಸದ ಶ್ರೇಯಸ್ ಪಟೇಲ್‌ ಮತ ಹಾಕಲು ಬರುವ ಸಾಧ್ಯತೆಗಳು ಕಡಿಮೆ. ಆದರೆ, ಶಾಸಕರಾದ ಸ್ವರೂಪ್‌ ಪ್ರಕಾಶ್ ಹಾಗೂ ಡಾ.ಸೂರಜ್‌ ರೇವಣ್ಣ, ಹಾಲಿ ಅಧ್ಯಕ್ಷ ಚಂದ್ರೇಗೌಡರ ವಿರುದ್ಧ ಮತ ಹಾಕುವುದು ನಿಶ್ಚಿತ. ಜೆಡಿಎಸ್‌ನ ಉಳಿದ 16 ಸದಸ್ಯರನ್ನು ಜೆಡಿಎಸ್‌ ನಾಯಕರು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಹೀಗಾಗಿ ಒಟ್ಟು 18 ಮತಗಳು ಅವಿಶ್ವಾಸ ನಿರ್ಣಯದ ಪರವಾಗಿ ಬೀಳಲಿವೆ ಎನ್ನುವ ಲೆಕ್ಕಾಚಾರ ನಡೆಯುತ್ತಿದೆ.

ಇನ್ನೊಂದೆಡೆ ಅವಿಶ್ವಾಸ ನಿರ್ಣಯದ ವಿರುದ್ಧ ಮತ ಹಾಕುವ ಸದಸ್ಯರ ಪಟ್ಟಿಯನ್ನು ಎಂ.ಚಂದ್ರೇಗೌಡ ಸಿದ್ಧ ಮಾಡಿಟ್ಟುಕೊಂಡಿದ್ದಾರೆ. ಅವರ ಲೆಕ್ಕಾಚಾರದಂತೆ ಅವಿಶ್ವಾಸ ನಿರ್ಣಯಕ್ಕೆ ಸೋಲಾಗುವುದು ನಿಶ್ಚಿತ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.

ಅವಿಶ್ವಾಸ ನಿರ್ಣಯ ಸೇರಿದಂತೆ ಯಾವುದೇ ಪರೀಕ್ಷೆಗೆ ಸಿದ್ಧನಾಗಿದ್ದೇನೆ. ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ.
ಎಂ.ಚಂದ್ರೇಗೌಡ ನಗರಸಭೆ ಅಧ್ಯಕ್ಷ

ಬಿಜೆಪಿ ಸದಸ್ಯರೇ ನಿರ್ಣಾಯಕ

ನಗರಸಭೆ ಉಪಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮೈತ್ರಿ ಧರ್ಮ ಪಾಲಿಸಿರುವ ಬಿಜೆಪಿ ಅವಿಶ್ವಾಸ ನಿರ್ಣಯದ ವಿಷಯದಲ್ಲಿ ಯಾವ ನಿಲುವು ತೆಗೆದುಕೊಳ್ಳಲಿದೆ ಎನ್ನುವುದು ನಿರ್ಣಾಯಕ ಆಗಲಿದೆ. ಒಂದು ವೇಳೆ ಬಿಜೆಪಿಯ 14 ಸದಸ್ಯರು ಚಂದ್ರೇಗೌಡರಿಗೆ ಬೆಂಬಲ ನೀಡಿದಲ್ಲಿ ನಿರ್ಣಯಕ್ಕೆ ಸೋಲಾಗಲಿದೆ. ಮೈತ್ರಿ ಧರ್ಮ ಪಾಲನೆಯ ಹೆಸರಿನಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ ಮತ ನೀಡಿದರೆ ಚಂದ್ರೇಗೌಡರ ಪದಚ್ಯುತಿ ನಿಶ್ಚಿತ ಎಂದು ಹೇಳಲಾಗುತ್ತಿದೆ. ಇದೀಗ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡರತ್ತ ಎಲ್ಲರ ದೃಷ್ಟಿ ನೆಟ್ಟಿದ್ದು ಅವರು ತೆಗೆದುಕೊಳ್ಳುವ ನಿರ್ಧಾರವೇ ಅಂತಿಮವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.