ADVERTISEMENT

ಬಾರದ ಸಂಬಳ: ತಪ್ಪದ ತೊಂದರೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2019, 19:38 IST
Last Updated 22 ಜೂನ್ 2019, 19:38 IST

ಹೊಳೆನರಸೀಪುರ:ತಾಲ್ಲೂಕಿನ ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ನಾಲ್ಕು ತಿಂಗಳಿಂದ ಸಂಬಳ ಬಾರದೆ ಜೀವನ ನಡೆಸುವುದು ತೊಂದರೆಯಾಗಿದೆ ಎಂದು ಉದ್ಯೋಗಿಗಳು ದೂರಿದ್ದಾರೆ.

ಹಾಸ್ಟೆಲ್‌ಗಳಲ್ಲಿ ಅಡುಗೆ ಮಾಡುವವರು ಮತ್ತು ಸಹಾಯಕರು, ಕಂಪ್ಯೂಟರ್‌ ಆಪರೇಟರ್‌ಗಳಾಗಿ ಕೆಲಸ ಮಾಡುತ್ತಿರುವವರೇ ಕಷ್ಟಕ್ಕೆ ಒಳಗಾದವರು.

‘ನಾವು ಬಡವರು ಈ ಸಂಬಳವನ್ನೇ ನಂಬಿ ಜೀವನ ನಡೆಸುತ್ತಿದ್ದೆವು. ಪ್ರತಿ ತಿಂಗಳೂ ನಮಗೆ ಇದೇ ರೀತಿ ತೊಂದರೆ ಆಗಿದೆ. ಜೊತೆಗೆ ಸರ್ಕಾರಿ ನೌಕರಿ ಪಡೆದಿರುವ ವಾರ್ಡ್‌ನ್‌ಗಳು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನಮಗೆ ತೊಂದರೆ ನೀಡುತ್ತಾರೆ. ನಮ್ಮಿಂದಲೇ ಹಾಸ್ಟೆಲ್‌ನ ಶೌಚಾಲಯನ್ನೂ ತೊಳೆಸುತ್ತಾರೆ. ನಮಗೆ ಗೌರವವೇ ಇಲ್ಲ’ ಎಂದು ಹೆಸರು ಹೇಳದ ಹಲವರು ದೂರಿದರು.

ADVERTISEMENT

ಈ ಬಗ್ಗೆ ತಾಲ್ಲೂಕು ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಸೀತಾರಾಮೇಗೌಡ ಅವರ ಗಮನ ಸೆಳೆದಾಗ ಖಜಾನೆಯಲ್ಲಿ ಸಾಫ್ಟ್‌ವೇರ್‌ ಅಪ್‌ ಲೋಡ್‌ ಮಾಡುತ್ತಿದ್ದ ಕಾರಣ ವೇತನ ವಿಳಂಬವಾಗಿತ್ತು. ಇನ್ನೆರೆಡು ದಿನದಲ್ಲಿ ಅವರ ಖಾತೆಗೆ ವೇತನ ಜಮೆ ಆಗಲಿದೆ’ ಎಂದು ಹೇಳಿದರು.

‘ಹಾಸ್ಟೆಲ್‌ಗಳ ಶೌಚಾಲಯ ಶುಚಿಗೊಳಿಸಲು ಪೌರಕಾರ್ಮಿಕರನ್ನು ನೇಮಿಸಿ ಅವರಿಗೆ ನಿಗದಿತ ಸಂಬಳವನ್ನು ಆಯಾ ವಾರ್ಡನ್‌ಗಳ ಖಾತೆಗೆ ಹಣ ಹಾಕುತ್ತಿದ್ದೆವು. ಅಡುಗೆಯವರಿಂದಾಗಲಿ ಅಡುಗೆ ಸಹಾಯಕರಿಂದಾಗಲಿ ಶೌಚಾಲಯ ಶುಚಿ ಗೊಳಿಸುವಂತಿಲ್ಲ. ಇಂತಹ ದೂರುಗಳು ಬಂದ ಹಿನ್ನೆಲೆಯಲ್ಲಿ ಪೌರಕಾರ್ಮಿಕರ ಹಣವನ್ನು ಇನ್ನು ಮುಂದೆ ನೇರವಾಗಿ ಅವರ ಖಾತೆಗೆ ಜಮಾ ಮಾಡಲಾಗುವುದು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.