ADVERTISEMENT

ಹಾಸನ | ಯುವಕನ ಕೊಲೆ: ಇಬ್ಬರಿಗೆ ಗಂಭೀರ ಗಾಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2023, 13:28 IST
Last Updated 24 ಡಿಸೆಂಬರ್ 2023, 13:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಾಸನ: ಮದ್ಯ ಸೇವನೆ ವೇಳೆ ನೀರು ಕೊಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಗಲಾಟೆಯಾಗಿ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಕಲ್ಲಹಳ್ಳಿ ಬೆಟ್ಟದ ಬಳಿ ನಡೆದಿದೆ. ವಡ್ಡರಹಟ್ಟಿ ಗ್ರಾಮದ ನಾಗೇಶ್ (30) ಕೊಲೆಯಾಗಿದ್ದು, ಮೋಹನ್, ಮಂಜು ಎಂಬುವವರಿಗೆ ಗಾಯಗಳಾಗಿವೆ.

ವಡ್ಡರಹಟ್ಟಿಯ ನಾಗೇಶ್, ಸಾಣೇನಹಳ್ಳಿಯ ರಾಮಚಂದ್ರ, ಮಂಜು, ಚೇತು, ಸ್ವಾಮಿ ಮತ್ತು ಶಿವು ಎಂಬುವವರು ಶನಿವಾರ ಸಂಜೆ ಪಾರ್ಟಿ ಮಾಡುತ್ತಿದ್ದರು. ಮದ್ಯಕ್ಕೆ ಸೇರಿಸಲು ನೀರು ಕೊಡುವಂತೆ ನಾಗೇಶ್ ಕಡೆಯವರನ್ನು ಚೇತು ಹಾಗೂ ಗೆಳೆಯರು ಕೇಳಿದ್ದಾರೆ. ಇದಕ್ಕೆ ನಿರಾಕರಿಸಿದ ನಾಗೇಶ್‌, ‘ನಾವು ಹಣ ಕೊಟ್ಟು ತಂದಿದ್ದೇವೆ, ಕೊಡಲ್ಲ’ ಎಂದಿದ್ದಾರೆ.

ಇದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಎರಡು ತಂಡಗಳ ಮಧ್ಯೆ ಜಗಳ ಶುರುವಾಗಿದೆ. ಈ ಸಂದರ್ಭದಲ್ಲಿ ಶಿವು ಮತ್ತು ಸ್ವಾಮಿ ಎನ್ನುವವರು ಫೋನ್ ಮಾಡಿ ಬೇರೆ ಹುಡುಗರನ್ನು ಸ್ಥಳಕ್ಕೆ ಕರೆಸಿದ್ದಾರೆ. ಸ್ಥಳಕ್ಕೆ ಬಂದ ನಾಲ್ಕೈದು ಯುವಕರು ಚಾಕುವಿನಿಂದ ದಾಳಿ ನಡೆದಿದ್ದಾರೆ. ನಾಗೇಶನ ಹೊಟ್ಟಿಗೆ ಬಲವಾಗಿ ಚಾಕುವಿನಿಂದ ಇರಿದಿದ್ದು, ಬಿಡಿಸಲು ಹೋದ ರಾಮಚಂದ್ರ ಹಾಗೂ ಮಂಜುಗೂ ಚಾಕುವಿನಿಂದ ಇರಿದಿದ್ದಾರೆ. ತೀವ್ರ ರಕ್ತಸ್ರಾವದಿಂದ ನಾಗೇಶ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಇಬ್ಬರನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನುಗ್ಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಪತ್ನಿಯ ಕೊಲೆ: ಪತಿ ಬಂಧನ

ಹಾಸನ: ಜಾವಗಲ್‌ ಠಾಣೆಯ ವ್ಯಾಪ್ತಿಯ ಸಿಂಗಟಗೆರೆಯಲ್ಲಿ ಶನಿವಾರ ಮಧ್ಯಾಹ್ನ ಒನಕೆಯಿಂದ ಹೊಡೆದು ಪತ್ನಿಯ ಕೊಲೆ ಮಾಡಿದ್ದು, ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಚಂದ್ರಮ್ಮ (55) ಕೊಲೆಯಾದ ಮಹಿಳೆ. ಆಕೆಯ ಪತಿ ಜಗದೀಶ್‌ ಬಂಧಿತ ಆರೋಪಿ.

ಚಂದ್ರಮ್ಮ ಮತ್ತು ಜಗದೀಶ ದಂಪತಿ ಸಿಂಗಟಗೆರೆ ಗ್ರಾಮದಲ್ಲಿ ವಾಸವಾಗಿದ್ದು, ಗಂಡ– ಹೆಂಡತಿ ಮಧ್ಯೆ ಸಣ್ಣ ಪುಟ್ಟ ವಿಚಾರಕ್ಕೆ ಜಗಳವಾಗುತ್ತಿತ್ತು. ಜಗದೀಶ ಕುಡಿತದ ಚಟಕ್ಕೆ ಬಿದಿದ್ದು, ನಿತ್ಯ ಮದ್ಯ ಸೇವಿಸಿ ಮನೆಯಲ್ಲಿ ಜಗಳ ಮಾಡುತ್ತಿದ್ದ. ಶನಿವಾರ ಬೆಳಿಗ್ಗೆ ಗಂಡ– ಹೆಂಡತಿ ಮಧ್ಯೆ ಜಗಳ ಶುರುವಾಗಿತ್ತು. ಇದನ್ನು ಗ್ರಾಮ ನಿವಾಸಿ ಮಂಜುನಾಥ ಎಂಬುವವರು, ಚಂದ್ರಮ್ಮನ ಅಣ್ಣ ಚಂದ್ರಪ್ಪ ಅವರಿಗೆ ಕರೆ ಮಾಡಿ ತಿಳಿಸಿದ್ದರು. ಗಂಡ–ಹೆಂಡತಿ ಜಗಳ ಇದ್ದುದ್ದೆ ಎಂದು ಚಂದ್ರಣ್ಣ ಸುಮ್ಮನಾಗಿದ್ದರು. ಮಧ್ಯಾಹ್ನ 2 ಗಂಟೆಗೆ ಗ್ರಾಮದ ಶಿವಮ್ಮ ಎಂಬುವವರು, ಮತ್ತೆ ಚಂದ್ರಣ್ಣ ಅವರಿಗೆ ಕರೆ ಮಾಡಿ, ಜಗದೀಶ ಒನಕೆಯಿಂದ ಹೊಡೆದು ಚಂದ್ರಮ್ಮಳನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾರೆ.

ತಕ್ಷಣ ಚಂದ್ರಣ್ಣ ಸಿಂಗಟಗೆರೆ ಗ್ರಾಮಕ್ಕೆ ಬಂದು ನೋಡಿದಾಗ, ಚಂದ್ರಮ್ಮ ಶವ ಬಚ್ಚಲು ಮನೆಯಲ್ಲಿ ಬಿದ್ದಿತ್ತು. ಈ ಕುರಿತು ಕೊಲೆಯಾದ ಚಂದ್ರಮ್ಮ ಅವರ ಅಣ್ಣ ಚಂದ್ರಣ್ಣ, ಜಾವಗಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.