ಬೇಲೂರು: ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಕಾನನಹಳ್ಳಿಯಲ್ಲಿ ವಿಕ್ರಾಂತ್ ಕಾಡಾನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಮಂಗಳವಾರ ನಡೆಸಿದ ಕಾರ್ಯಾಚರಣೆ ವಿಫಲವಾಗಿದ್ದು, ಬುಧವಾರವೂ ನಡೆಯಲಿದೆ.
ಬೆಳಿಗ್ಗೆ 9 ಗಂಟೆಗೆ ಏಳು ಸಾಕಾನೆ ಬಳಸಿ ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಮಧ್ಯಾಹ್ನ ಒಂದರವರೆಗೂ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದರೂ ಸಹ ಕಾರ್ಯಾಚರಣೆ ಸಫಲವಾಗಲಿಲ್ಲ.
ವಿಕ್ರಾಂತ್ ಕಾಡಾನೆಯನ್ನು ಗುಂಪಿನಿಂದ ಬೇರ್ಪಡಿಸಲು ಅರಣ್ಯ ಇಲಾಖೆಯ ತಂಡ ಸಾಕಷ್ಟು ಶ್ರಮಿಸಿದ್ದ ನಂತರ ವಿಕ್ರಾಂತ್ ಆನೆಯ ಜೊತೆ ನಾಲ್ಕು ಗಂಡಾನೆಗಳು ಸಹ ಬಂದವು. ಪ್ರಯತ್ನ ಪಟ್ಟು ಬೇರ್ಪಡಿಸಿದ್ದ ನಂತರ ಎರಡು ಭಾರಿ ವಿಕ್ರಾಂತ್ ಆನೆ ಗುಂಪಿನಿಂದ ಹೊರ ಬಂದಿತು. ಆದರೂ ದಟ್ಟ ಅರಣ್ಯವಾಗಿದ್ದರಿಂದ ಅರವಳಿಕೆ ನೀಡಲು, ಶೂಟ್ ಮಾಡಲು ಸಾಧ್ಯವಾಗಿಲ್ಲ.
ಡಿಎಫ್‌ಒ ಸೌರಭ್ ಕುಮಾರ್ ಮಾತನಾಡಿ, ಶೂಟ್ ಮಾಡಿದ್ದಾಗ ಅರವಳಿಕೆ ಔಷಧ ಸರಿಯಾದ ಜಾಗಕ್ಕೆ ತಗುಲದಿದ್ದರೆ, ಕೆಲಸ ಮಾಡುವ ಸಾಧ್ಯತೆ ಕಡಿಮೆ. ಸುರಕ್ಷತೆಯ ದೃಷ್ಟಿಯಿಂದ ಹಾಗೂ ಯಾವುದೇ ಅವಘಡಗಳು ಸಂಭವಿಸಬಾರದು ಎನ್ನುವ ಉದ್ದೇಶದಿಂದ ಇಂದು ಕಾರ್ಯಾಚರಣೆ ಸ್ಥಗಿತ ಮಾಡಲಾಗಿದೆ ಎಂದು ತಿಳಿಸಿದರು.
ಕಾರ್ಯಾಚರಣೆಯಲ್ಲಿ ಇಟಿಎಫ್ ತಂಡದ ಎಸಿಎಫ್ ಷರಿಫ್, ಎಸಿಎಫ್ ಮೋಹನ್ ಕುಮಾರ್ ಮಧುಸೂದನ್, ಖಲಂಧರ್, ಆರ್‌ಎಫ್ಒ ಬಿ.ಜಿ.ಯತೀಶ್, ಸುನೀಲ್, ಲಷ್ಕರ್ ನಾಯಕ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.