ADVERTISEMENT

ಬುದ್ಧನ ಪ್ರತಿಮೆಯ ವಿಜೃಂಭಣೆಯ ಮೆರವಣಿಗೆ

ಬೌದ್ಧ ಪೂರ್ಣಿಮೆ ಆಚರಣೆಯ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 18 ಮೇ 2019, 20:20 IST
Last Updated 18 ಮೇ 2019, 20:20 IST
ಬುದ್ಧ ಜಯಂತಿ ಅಂಗವಾಗಿ ಬೇಲೂರಿನ ಗಾಂಧಾರ ಬುದ್ಧ ವಿಹಾರ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಗೌತಮ ಬುದ್ಧನ ಪ್ರತಿಮೆಯ ಮೆರವಣಿಗೆ ಶನಿವಾರ ನಡೆಯಿತು
ಬುದ್ಧ ಜಯಂತಿ ಅಂಗವಾಗಿ ಬೇಲೂರಿನ ಗಾಂಧಾರ ಬುದ್ಧ ವಿಹಾರ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಗೌತಮ ಬುದ್ಧನ ಪ್ರತಿಮೆಯ ಮೆರವಣಿಗೆ ಶನಿವಾರ ನಡೆಯಿತು   

ಬೇಲೂರು:ಇಲ್ಲಿನ ಗಾಂಧಾರ ಬುದ್ಧ ವಿಹಾರ ಚಾರಿಟಬಲ್‌ ಟ್ರಸ್ಟ್‌ ವತಿಯಿಂದ ಬುದ್ಧ ಜಯಂತಿ ಅಂಗವಾಗಿ ಗೌತಮ ಬುದ್ಧನ 12 ಅಡಿ ಎತ್ತರದ ಪ್ರತಿಮೆಯ ಮೆರವಣಿಗೆ ಶನಿವಾರ ಪಟ್ಟಣದಲ್ಲಿ ವಿಜೃಂಭಣೆಯಿಂದ ನಡೆಯಿತು.

ತಾಲ್ಲೂಕಿನ ಮದಘಟ್ಟ ಬಳಿಯ ಗುಡ್ಡದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಬುದ್ಧನ 108 ಅಡಿ ಎತ್ತರದ ಪ್ರತಿಮೆ ಸ್ಥಾಪಿಸಲು ಗಾಂಧಾರ ಬುದ್ಧ ವಿಹಾರ ಚಾರಿಟಬಲ್‌ ಟ್ರಸ್ಟ್‌ ಉದ್ದೇಶಿಸಿದ್ದು ಇದಕ್ಕೆ ಪೂರ್ವಭಾವಿಯಾಗಿ ಮತ್ತು ಬೌದ್ಧ ಪೂರ್ಣಿಮೆ ಅಂಗವಾಗಿ ಶನಿವಾರ ಬುದ್ಧನ 12 ಅಡಿ ಎತ್ತರದ ಪ್ರತಿಮೆಯನ್ನು ಮೆರವಣಿಗೆ ಮೂಲಕ ಗಾಂಧಾರ ವಿಹಾರ ಕೇಂದ್ರಕ್ಕೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಯಿತು.

ಅಂಬೇಡ್ಕರ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಬುದ್ಧನ ಪ್ರತಿಮೆ ಮತ್ತು ಅಂಬೇಡ್ಕರ್‌ ಭಾವಚಿತ್ರದೊಂದಿಗೆ ಮೆರವಣಿಗೆಯು ಬಸವೇಶ್ವರ ವೃತ್ತ, ನೆಹರೂ ವೃತ್ತ ಮತ್ತು ಕೆಂಪೇಗೌಡ ವೃತ್ತದ ಮೂಲಕ 12 ಕಿ.ಮೀ. ದೂರದ ಮದಘಟ್ಟ ಬಳಿಯ ಗಾಂಧಾರ ವಿಹಾರ ಕೇಂದ್ರ ತಲುಪಿತು. ಬಳಿಕ ಗಾಂಧಾರ ವಿಹಾರ ಕೇಂದ್ರದಲ್ಲಿ ಸಕಲ ವಿಧಿವಿಧಾನದ ಮೂಲಕ ಬುದ್ಧನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಯಿತು.

ADVERTISEMENT

ಗಾಂಧಾರ ಬುದ್ಧ ವಿಹಾರ ಚಾರಿಟಬಲ್‌ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ರಾಜು ಅರೇಹಳ್ಳಿ ‘ಗಾಂಧಾರ ಬುದ್ಧ ವಿಹಾರ ಕೇಂದ್ರವನ್ನು ಸಾಂಸ್ಕೃತಿಕ ಕೇಂದ್ರವನ್ನಾಗಿಸುವ ಉದ್ದೇಶ ಹೊಂದಲಾಗಿದೆ. ಸುಮಾರು 30ಕ್ಕೂ ಹೆಚ್ಚು ಬೌದ್ಧ ರಾಷ್ಟ್ರಗಳ ನೆರವಿನೊಂದಿಗೆ ಇಲ್ಲಿ ವಿಹಾರ ಕೇಂದ್ರ ನಿರ್ಮಿಸಲು ಉದ್ದೇಶಿಸಲಾಗಿದೆ. ಗೌತಮ ಬುದ್ಧ ಮತ್ತು ಬಾಬಾಸಾಹೇಬ್‌ ಅಂಬೇಡ್ಕರ್‌ ಅವರ ಚಿಂತನೆಗಳನ್ನು ಸಾಕಾರಗೊಳಿಸಲು ವಿಹಾರ ಕೇಂದ್ರ ಸ್ಥಾಪಿಸಲಾಗುತ್ತಿದೆ’ ಎಂದರು.

ಬಸವೇಶ್ವರ ವೃತ್ತದಲ್ಲಿ ಶಾಸಕ ಕೆ.ಎಸ್‌.ಲಿಂಗೇಶ್‌ ಬುದ್ಧನ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ನಮನ ಸಲ್ಲಿಸಿದರು. ಟ್ರಸ್ಟ್‌ನ ಸಹ ಕಾರ್ಯದರ್ಶಿ ಶಶಿಧರ್‌ ಮೌರ್ಯ, ಚಾಮರಾಜನಗರ ನಳಂದ ಬೌದ್ಧ ವಿಶ್ವವಿದ್ಯಾಲಯದ ಬೋಧಿಸತ್ತ ಭಂತೇಜಿ, ಪ್ರಮುಖರಾದ ಯಡೇಹಳ್ಳಿ ವಿರೂಪಾಕ್ಷ, ಪರ್ವತಯ್ಯ, ಬಿ.ಎಲ್‌.ಲಕ್ಷ್ಮಣ್‌, ತೆಂಡೇಕೆರೆ ರಮೇಶ್‌, ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.