ಅರಕಲಗೂಡು ಪಿಎಲ್‌ಡಿ ಬ್ಯಾಂಕಿನಲ್ಲಿ ಪಡೆದ ಸಾಲ ಮರುಪಾವತಿಸಿ ಬಡ್ಡಿಮನ್ನಾ ಯೋಜನೆಯ ಪ್ರಯೋಜನ ಪಡೆಯಲು ಮುಂದಾದ ಮಾದಾಪುರ ಶೇಖರ್ ಅವರನ್ನು ಶಾಸಕ ಎ. ಮಂಜು ಅಭಿನಂಧಿಸಿದರು. ಉಪಾದ್ಯಕ್ಷ ಕೀರ್ತಿರಾಜ್, ವ್ಯಸ್ಥಾಪಕಿ ರೇವತಿ ಹಾಗೂ ಬ್ಯಾಂಕಿನ ನಿರ್ದೇಶಕರು ಪಾಲ್ಗೊಂಡಿದ್ದರು
ಅರಕಲಗೂಡು: ರಾಜ್ಯ ಸರ್ಕಾರ ಘೋಷಿಸಿರುವ ಸಹಕಾರಿ ಬ್ಯಾಂಕ್ ಮತ್ತು ಸಹಕಾರ ಸಂಘಗಳಲ್ಲಿ ರೈತರು ಪಡೆದ ಮಧ್ಯಮಾವಧಿ ಮತ್ತು ಧೀರ್ಘಾವದಿ ಸಾಲದ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಯೋಜನೆಯ ಲಾಭವನ್ನು ರೈತರು ಪಡೆದು ಕೊಳ್ಳುವಂತೆ ಶಾಸಕ ಹಾಗೂ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎ.ಮಂಜು ತಿಳಿಸಿದರು.
ಪಟ್ಟಣದಲ್ಲಿ ಬುಧವಾರ ನಡೆದ ಪಿಎಲ್‌ಡಿ ಬ್ಯಾಂಕ್ ಆಡಳಿತ ಮಂಡಳಿಯ ಸಾಮಾನ್ಯ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕಿನಲ್ಲಿ 498 ಜನರು ಬಡ್ಡಿ ಮನ್ನಾ ಯೋಜನೆಯ ಲಾಭ ಪಡೆಯಲು ಅರ್ಹರಾಗಿದ್ದು, ಇವರು ಪಾವತಿಸ ಬೇಕಿರುವ ಸಾಲದ ಒಟ್ಟು ಮೊತ್ತ ₹ 9.02 ಕೋಟಿ. ಸಾಲವನ್ನು ಸಂಪೂರ್ಣವಾಗಿ ಮರುಪಾವತಿಸಿದಲ್ಲಿ ₹4.80 ಕೋಟಿ ಬಡ್ಡಿ ಮನ್ನಾ ಪ್ರಯೋಜನ ದೊರೆಯಲಿದೆ. ಫೆ.29 ಬಡ್ಡಿ ಮನ್ನಾ ಯೋಜನೆಯಡಿ ಸಾಲ ಮರುಪಾವತಿಗೆ ಕೊನೆಯ ದಿನವಾಗಿದೆ. ಸಾಲವನ್ನು ಪೂರ್ಣವಾಗಿ ಮರುಪಾವತಿ ಮಾಡಿದ ರೈತರಿಗೆ ಆದ್ಯತೆ ಮೇಲೆ ಬ್ಯಾಂಕ್ ಮರು ಸಾಲ ಮಂಜೂರು ಮಾಡಲಿದೆ, ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಬಡ್ಡಿ ಮನ್ನಾ ಯೋಜನೆಯ ಲಾಭಪಡೆಯಲು ಸಾಲ ಮರುಪಾವತಿಗೆ ಮುಂದಾದ ಮಾದಾಪುರ ಗ್ರಾಮದ ಶೇಖರ್, ಚಿಕ್ಕಮಗ್ಗೆ ಗ್ರಾಮದ ರಮೇಶ್, ಯಗಟಿ ಗ್ರಾಮದ ಪ್ರೇಮಾ ಸತೀಶ್ ಅವರನ್ನು ಶಾಸಕ ಮಂಜು ಅಭಿನಂದಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಕೀರ್ತಿರಾಜ್, ಆಡಳಿತ ಮಂಡಳಿ ನಿರ್ದೇಶಕರು, ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ್, ಕೇಂದ್ರ ಬ್ಯಾಂಕಿನ ಅಧಿಕಾರಿ ಚಿಕ್ಕಸಿದ್ದೇಗೌಡ, ಬ್ಯಾಂಕ್ ವ್ಯವಸ್ಥಾಪಕಿ ರೇವತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.