ADVERTISEMENT

ಧಾವಂತದಲ್ಲಿ ತಪ್ಪು ಸಂದೇಶ ಕೊಡಬೇಡಿ

ಮಾಧ್ಯಮದ ದಿನಾಚರಣೆಯಲ್ಲಿ ಶಾಸಕ ಪ್ರೀತಂ ಜೆ.ಗೌಡ ಸಲಹೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 16:28 IST
Last Updated 24 ಜುಲೈ 2022, 16:28 IST
ಹಾಸನ ಹೊರ ವಲಯದ ಖಾಸಗಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಾಧ್ಯಮ ದಿನಾಚರಣೆಯನ್ನು ಶಾಸಕ ಪ್ರೀತಂ ಜೆ.ಗೌಡ ಉದ್ಘಾಟಿಸಿದರು.
ಹಾಸನ ಹೊರ ವಲಯದ ಖಾಸಗಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಾಧ್ಯಮ ದಿನಾಚರಣೆಯನ್ನು ಶಾಸಕ ಪ್ರೀತಂ ಜೆ.ಗೌಡ ಉದ್ಘಾಟಿಸಿದರು.   

ಹಾಸನ: ‘ನಾವೇ ಮೊದಲು ಸುದ್ದಿ ನೀಡಬೇಕು. ವಿಭಿನ್ನ, ವಿಶೇಷ ವರದಿ ನೀಡಬೇಕೆಂಬ ಧಾವಂತದಲ್ಲಿ ಅಪರಾಧ ವೈಭವೀಕರಣ, ಸಮಾಜಕ್ಕೆ ತಪ್ಪು ಸಂದೇಶ ನೀಡಬೇಡಿ’ ಎಂದು ಶಾಸಕ ಪ್ರೀತಂ ಜೆ.ಗೌಡ ಸಲಹೆ ನೀಡಿದರು.

ನಗರ ಹೊರವಲಯದ ಖಾಸಗಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಮಾಧ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯಾವುದೇ ತಪ್ಪು ಕಂಡರೂ ಸಮಾಜದ 4ನೇ ಅಂಗವಾಗಿ ಅದನ್ನು ತಿದ್ದುವ ಹಕ್ಕು ಪತ್ರಕರ್ತರಿಗಿದೆ. ಆದರೆ ಆಗಿರುವ ತಪ್ಪನ್ನು ಒಮ್ಮೆ ಆ ವ್ಯಕ್ತಿಯ ಗಮನಕ್ಕೆ ತರಬೇಕು. ಆದರೂ ಆತ ಸರಿಯಾಗುವ ಲಕ್ಷಣ ಕಾಣದಿದ್ದರೆ, ಸುದ್ದಿ ಮಾಡುವ ಮೂಲಕ ಎಚ್ಚರಿಸುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ‘ದಶಕದ ಹಿಂದಿನ ದಿನಗಳಿಗೆ ಹೋಲಿಸಿದರೆ, ಪತ್ರಕರ್ತರನ್ನು ಬೆರಳು ಮಾಡಿ ತೋರಿಸುವ ಹಂತಕ್ಕೆ ತಲುಪಿರುವುದು ಸುದ್ದಿ ಮನೆಗೆ ನೋವಿನ ಸಂಗತಿ. ಸಂಖ್ಯೆಗಿಂತ ಗುಣಮಟ್ಟದ ಪತ್ರಕರ್ತರು ಹೆಚ್ಚಾಗಬೇಕು’ ಎಂದು ಹೇಳಿದರು.

‘ಪತ್ರಕರ್ತ ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವುದು ಮುಖ್ಯ. ಇಲ್ಲವಾದರೆ ತಾನೊಬ್ಬ ಪತ್ರಕರ್ತ ಎಂದು ದಿಟ್ಟತನದಿಂದ ಹೇಳಿಕೊಳ್ಳಲು ಕಷ್ಟವಾಗುತ್ತದೆ. ಸುದ್ದಿಗಳಲ್ಲಿ ಒಬ್ಬ ವ್ಯಕ್ತಿಯನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಮೊದಲು ಆ ಪ್ರಕರಣದ ಪೂರ್ವಾಪರ ವಿಮರ್ಶೆ ಮಾಡುವುದು ಒಳ್ಳೆಯದು. ಇದಕ್ಕೆ ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಪ್ರಕರಣ ಸಾಕ್ಷಿ’ ಎಂದರು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಾಳ್ಳುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜು, ನಗರಸಭೆ ಅಧ್ಯಕ್ಷ ಆರ್.ಮೋಹನ್, ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯ ಎಚ್.ಬಿ.ಮದನ್‍ಗೌಡ, ಸಂಘದ ಮಾಜಿ ಅಧ್ಯಕ್ಷರಾದ ರವಿ ನಾಕಲಗೂಡು, ಕೆ.ಆರ್. ಮಂಜುನಾಥ್, ಎಸ್.ಆರ್. ಪ್ರಸನ್ನ ಕುಮಾರ್, ಸಮಾಜ ಸೇವಕಿ ಕಾಂಚನಮಾಲಾ, ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಇದ್ದರು.

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಿದ ಮಕ್ಕಳನ್ನು ಸನ್ಮಾನಿಸಲಾಯಿತು. ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಕಾಂಚನಮಾಲಾ ಅವರನ್ನು ಗೌರವಿಸಲಾಯಿತು. ಪತ್ರಕರ್ತರು ಹಾಗೂ ಪತ್ರಿಕಾ ವಿತರಕರನ್ನು ಅಭಿನಂದಿಸಲಾಯಿತು.

‘ಪತ್ರಿಕಾ ವೃತ್ತಿ ಪವಿತ್ರವಾದುದು’

ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಪ್ರತಿಯೊಬ್ಬರಿಗೂ ಉತ್ತಮ ಬದುಕು ರೂಪಿಸುವ ಹೊಣೆಗಾರಿಕೆ ಪತ್ರಿಕಾ ರಂಗಕ್ಕಿದ್ದು, ಇದೊಂದು ಅತ್ಯಂತ ಪವಿತ್ರವಾದ ವೃತ್ತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಹಾಸನ ಜಿಲ್ಲೆಯ ಪತ್ರಕರ್ತರು ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಜನರ ಆಶಯಗಳನ್ನು ವರದಿಗಳ ಮೂಲಕ ಬಿತ್ತರಿಸಿ, ಸೌಕರ್ಯ ಕಲ್ಪಿಸಲು ಆಡಳಿತ ವ್ಯವಸ್ಥೆಯ ಜೊತೆಗೆ ಕೈಜೋಡಿಸುತ್ತಿದ್ದಾರೆ ಎಂದರು.

ಶಾಸಕ ಎಚ್‌.ಡಿ. ರೇವಣ್ಣ ಮಾತನಾಡಿ, ಜಿಲ್ಲೆಯಲ್ಲಿನ ಪತ್ರಕರ್ತರ ಕಾರ್ಯ ಶ್ಲಾಘನೀಯ. ಯಾವುದೇ ಸಂದರ್ಭದಲ್ಲೂ ವೃತ್ತಿಪರತೆಯನ್ನು ತೋರಿಸುತ್ತಿದ್ದಾರೆ. ಕೋವಿಡ್–19, ಮಳೆ ಸೇರಿದಂತೆ ಎಲ್ಲ ಸಂದರ್ಭಗಳಲ್ಲಿ ಸಮಾಜದ ನೋವುಗಳನ್ನು ಆಡಳಿತದ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.