ADVERTISEMENT

ಸೋಂಕಿತರಿಗೆ ಉತ್ತಮ ಚಿಕಿತ್ಸೆ: ಸಲಹೆ

ಹೊಳೆನರಸೀಪುರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 2:27 IST
Last Updated 26 ಸೆಪ್ಟೆಂಬರ್ 2020, 2:27 IST
ಹೊಳೆನರಸೀಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ಶಿವಣ್ಣ, ಕಾರ್ಯನಿರ್ವಾಹಣಾಧಿಕಾರಿ ಕೆ.ಯೋಗೇಶ್ ಇದ್ದಾರೆ
ಹೊಳೆನರಸೀಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಚ್.ಡಿ.ರೇವಣ್ಣ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ಶಿವಣ್ಣ, ಕಾರ್ಯನಿರ್ವಾಹಣಾಧಿಕಾರಿ ಕೆ.ಯೋಗೇಶ್ ಇದ್ದಾರೆ   

ಹೊಳೆನರಸೀಪುರ: ‘ಕೊರೊನಾ ಸೋಂಕಿತರಿಗೆ ತಾಲ್ಲೂಕಿನ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಿ. ಖಾಸಗಿ ಆಸ್ಪತ್ರೆಯ ಖರ್ಚು, ವೆಚ್ಚವನ್ನು ಸರ್ಕಾರದಿಂದ ದೊರಕಿಸಿಕೊಡುವ ಪ್ರಯತ್ನ ಮಾಡುತ್ತೇನೆ’ ಎಂದು ಶಾಸಕ ಎಚ್.ಡಿ.ರೇವಣ್ಣ ತಾಲ್ಲೂಕು ವೈದ್ಯಾಧಿಕಾರಿ ಡಾ.ರಾಜೇಶ್‍ಗೆ ತಿಳಿಸಿದರು.

ಶುಕ್ರವಾರ ನಡೆದ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕನ್ನು ನಿರ್ಲಕ್ಷಿಸಬಾರದು ಎಂದು ಸದಸ್ಯರಿಗೆ ಎಚ್ಚರಿಕೆ ನೀಡಿದರು.

ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್‌ ಸಹಾಯವಾಣಿ ಸ್ಥಾಪಿಸಿ ದೈನಂದಿನ ಮಾಹಿತಿ ನೀಡಬೇಕು ಎಂದರು.

ADVERTISEMENT

ಗ್ರಾಮೀಣ ಭಾಗದ ಮಕ್ಕಳೂ ಎಲ್.ಕೆ.ಜಿ ಯಿಂದಲೇ ಇಂಗ್ಲೀಷ್ ಶಿಕ್ಷಣ ಪಡೆಯಲಿ ಎನ್ನುವ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪಿಸಲು ತಾಲ್ಲೂಕಿನ ಗನ್ನಿಕಡ, ಪಡವಲಹಿಪ್ಪೆ, ಆಲದಹಳ್ಳಿ ಸಮೀಪ ಸ್ಥಳ ಪರಿಶೀಲನೆ ನಡೆಸಲಾಗಿದೆ. ಅರಕಲಗೂಡು ತಾಲ್ಲೂಕಿನಲ್ಲಿಯೂ ಶಾಸಕ ಎ.ಟಿ.ರಾಮಸ್ವಾಮಿ ಅವರು ಸೂಚಿಸುವ ಸ್ಥಳದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾರಂಭಿಸಲಾಗುವುದು ಎಂದರು.

ಪಶುವೈದ್ಯಕೀಯ ಇಲಾಖೆಯವರು ಪಶುಗಳ ಕಾಲುಬಾಯಿ ರೋಗದ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ಶಿಬಿರಗಳನ್ನು ಏರ್ಪಡಿಸಿ ಹಾಗೂ ಭಿತ್ತಿಪತ್ರಗಳ ಮೂಲಕ ಜನರಿಗೆ ಶಿಬಿರದ ಅರಿವು ಮೂಡಿಸಬೇಕು ಎಂದು ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ತಿಪ್ಪೇಸ್ವಾಮಿ ಅವರಿಗೆ ಸೂಚಿಸಿದರು.

ತಾಲ್ಲೂಕಿನಲ್ಲಿ ರಾಗಿ ಮತ್ತು ಜೋಳದ ಬೆಳೆ ಉತ್ತಮವಾಗಿದ್ದು, ಭತ್ತದ ಬೆಳೆ ರಕ್ಷಣೆಗೆ ಔಷಧ ಸಿಂಪಡಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.

ಶಾಸಕರ ನಿಧಿಯ ಹಣವನ್ನು ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ ಬಳಸಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷ ಶಿವಣ್ಣ, ಸದಸ್ಯರಾದ ಜವರೇಗೌಡ, ವಳಂಬಿಗೆ ನಾರಾಯಣ, ಬಾಗಿವಾಳು ಬಸವರಾಜು, ಕೆರಗೋಡು ಶಿವಣ್ಣ, ರಾಜೇಶ್ವರಿ, ಚಂದ್ರಣ್ಣ, ಹೇಮಲತಾ, ಮಮತಾ, ಕವಿತಾ, ಕಾರ್ಯ ನಿರ್ವಾಹಣಾಧಿಕಾರಿ ಕೆ.ಯೋಗೇಶ್, ಡಿವೈಎಸ್‍ಪಿ ಲಕ್ಷ್ಮೇಗೌಡ, ಜಿ.ಪಂ.ಎಂಜಿನಿಯರ್ ಪ್ರಭು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.