ADVERTISEMENT

ಬೆಳೆ ನಷ್ಟ ಪರಿಹಾರ ಬಿಡುಗಡೆ ಮಾಡಿ: ರೇವಣ್ಣ

ಐದು ತಾಲ್ಲೂಕು ಮಳೆ ಪೀಡಿತ, ನಷ್ಟದ ಅಂದಾಜು ₹350 ಕೋಟಿ: ರೇವಣ್ಣ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2020, 14:01 IST
Last Updated 17 ಅಕ್ಟೋಬರ್ 2020, 14:01 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಹಾಸನ: ‘ಹಾಸನ, ಆಲೂರು, ಬೇಲೂರು, ಸಕಲೇಶಪುರ, ಅರಕಲಗೂಡು ತಾಲ್ಲೂಕುಗಳನ್ನು ಮಳೆ ಪೀಡಿತ ಎಂದು ಸರ್ಕಾರ ಘೋಷಿಸಿದ್ದರೂ ಇದುವರೆಗೂ ಬೆಳೆ ನಷ್ಟಕ್ಕೆ ಪರಿಹಾರ ಹಣ ಬಿಡುಗಡೆ ಮಾಡಿಲ್ಲ’ಎಂದು ಶಾಸಕ ಎಚ್.ಡಿ. ರೇವಣ್ಣ ಆರೋಪಿಸಿದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡವಳಿಕೆಯಿಂದ ಜನರಿಗೆ ಬೇಸರವಾಗಿದೆ. ಹಾಸನ ಜಿಲ್ಲೆ ಕರ್ನಾಟಕದ ಭೂಪಟದಲ್ಲಿ
ಇದೆಯೋ ಅಥವಾ ರಾಜ್ಯ ಸರ್ಕಾರ ಜಿಲ್ಲೆಯನ್ನು ಮರೆತಿದೆಯೋ ಎಂಬ ಅನುಮಾನ ಕಾಡುತ್ತಿದೆ. ಅಭಿವೃದ್ಧಿ ವಿಷಯದಲ್ಲಿ ಹಾಸನ ಜಿಲ್ಲೆ ಅನಾಥವಾಗಿದೆ. ಕಳೆದ ಜೂನ್‌ ತಿಂಗಳಿನಿಂದ ಸುರಿದ ಮಳೆಗೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ಸೇರಿ ಅಂದಾಜು ₹ 350 ಕೋಟಿ ನಷ್ಟವುಂಟಾಗಿದೆ ಎಂದು ಸಂಬಂಧಪಟ್ಟ ಇಲಾಖೆಗಳೇ ವರದಿ ನೀಡಿವೆ. ರೈತರು ಯಾವುದೇ ಆದಾಯ ಇಲ್ಲದೇ ತೀವ್ರ ನಷ್ಟ ಅನುಭವಿಸುತ್ತಿದ್ದು, ತಕ್ಷಣವೇ ನಷ್ಟದ ಅರ್ಧದಷ್ಟು ಪರಿಹಾರ ಹಣವನ್ನಾದರೂ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು’ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ನಿರಂತರ ಮಳೆಯಿಂದ ರಾಜ್ಯದಾದ್ಯಂತ ₹4200 ಕೋಟಿ ನಷ್ಟವಾಗಿದೆ. ಜನರ ಬದುಕು ಬೀದಿಗೆ ಬಂದಿದೆ. ಆದರೆ, ಹಾಸನವೂ ರಾಜ್ಯದ ಒಂದು ಜಿಲ್ಲೆ ಎಂಬುದನ್ನೇ ರಾಜ್ಯ ಸರ್ಕಾರ ಮರೆತಿದೆ. ಪ್ರಧಾನಿ ಮೋದಿ ಸಹ ಯಡಿಯೂರಪ್ಪನವರಿಗೆ ಅಭಯ ನೀಡಿದ್ದಾರೆ. ಕೇವಲ ಮಾತಿನ ಭರವಸೆಯಿಂದ ಪ್ರವಾಹ ಸಂತ್ರಸ್ತರಿಗೆ ಅನುಕೂಲವಾಗುವುದಿಲ್ಲ ಎಂದು ಟೀಕಿಸಿದರು.

ADVERTISEMENT

ಜಿಲ್ಲೆಯಲ್ಲಿ ಈ ಬಾರಿ 96 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆ ಜೋಳ ಬೆಳೆಯಲಾಗಿದ್ದು, 6 ಲಕ್ಷ
ಮೆಟ್ರಿಕ್‌ ಟನ್‌ ಉತ್ಪಾದನೆಯಾಗುವ ಸಾಧ್ಯತೆ ಇದೆ. ಕೆಂದ್ರ ಸರ್ಕಾರದಿಂದ ಕ್ವಿಂಟಲ್‌ಗೆ ₹1750 ಬೆಂಬಲ ಬೆಲೆ ನೀಡಿ
ಖರೀದಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪಂಚಾಯಿತಿ ವಿವಿಧ ಸ್ಥಾಯಿ ಸಮಿತಿಗಳನ್ನು ರಚಿಸಿ, ಬಾಕಿ ಉಳಿದ ಕಾಮಗಾರಿಗೆ ಚಾಲನೆ ನೀಡಬೇಕೆಂದು ಈಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯಿಸಲಾಗಿತ್ತು. ಸಭೆ ನಡೆದ 7 ದಿನಗಳ ಒಳಗೆ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡಬೇಕು. ಆದರೆ, ಇಲ್ಲಿವರಗೆ ಕೆಲಸಗಳಾಗಿಲ್ಲ. ಜಿಲ್ಲಾ ಪಂಚಾಯಿತಿಯಲ್ಲಿ ಏನು ನಡೆಯುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಅಧಿಕಾರಿ ಹಾಗೂ ಚುನಾಯಿತ ಪ್ರತಿನಿಧಿಗಳ ಸಮನ್ವಯ ಕೊರತೆಯಿಂದ ಕಳೆದ ವರ್ಷ ₹6 ಕೋಟಿ ಅನುದಾನ ವಾಪಸ್ಸಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಅನುದಾನ ಬಳಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು
ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.