ADVERTISEMENT

ರೇವಣ್ಣ ರಾಜಕೀಯ ಸನ್ಯಾಸ ಸ್ವೀಕರಿಸಲಿ: ಶಾಸಕ ಪ್ರೀತಂ ಗೌಡ

’ಪ್ರಧಾನಿ ಟೀಕಿಸಿದವರಿಗೆ ಹೀನಾಯ ಸೋಲು’

​ಪ್ರಜಾವಾಣಿ ವಾರ್ತೆ
Published 25 ಮೇ 2019, 15:23 IST
Last Updated 25 ಮೇ 2019, 15:23 IST
ಪ್ರೀತಂ ಜೆ ಗೌಡ
ಪ್ರೀತಂ ಜೆ ಗೌಡ   

ಹಾಸನ: ‘ನರೇಂದ್ರ ಮೋದಿ ಮತ್ತೆ ಪ್ರಧಾನಿಯಾದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂಬ ಹೇಳಿಕೆ ನೀಡಿದ್ದ ಸಚಿವ ಎಚ್‌.ಡಿ.ರೇವಣ್ಣ ಮಾತಿಗೆ ತಕ್ಕಂತೆ ನಡೆದುಕೊಳ್ಳಬೇಕು’ ಎಂದು ಬಿಜೆಪಿ ಶಾಸಕ ಪ್ರೀತಂ ಗೌಡ ಹೇಳಿದರು.

‘ಮೋದಿ ಟೀಕಿಸಿದ ಹಲವರು ಹೀನಾಯವಾಗಿ ಸೋಲು ಕಂಡಿದ್ದಾರೆ. ರಾಹುಲ್‌ ಗಾಂಧಿ, ಅಜಿತ್ ಸಿಂಗ್‌ ಸೇರಿದಂತೆ ಹಲವರು ಇದ್ದಾರೆ. ಇದಕ್ಕೆ ದೇವೇಗೌಡ, ರೇವಣ್ಣ ಹೊರತಲ್ಲ. ಮೊದಲು ನಾನು ಎಂಬುದನ್ನು ಅವರು ಬಿಡಬೇಕು. ಇದೇ ರೀತಿಯ ವರ್ತನೆ ಮುಂದುವರಿಸಿದರೆ ಜಿಲ್ಲೆಯ ಜನರು ತಕ್ಕ ಪಾಠ ಕಲಿಸುತ್ತಾರೆ. ಮಂಡ್ಯ ಜನ‌ ಈಗಾಗಲೇ ತೋರಿಸಿಕೊಟ್ಟಿದ್ದಾರೆ’ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.

‘ನಾನು ನಿಂಬೆ ಹಣ್ಣು ಹಿಡಿದುಕೊಂಡು ಶಾಸ್ತ್ರ ಹೇಳುವುದಿಲ್ಲ. ಸಚಿವರ ಅಭಿವೃದ್ಧಿ ವಿಚಾರಗಳಿಗೆ ಮಾತ್ರ ಬೆಂಬಲಿಸುತ್ತೇನೆ. ಅವರರ ರಾಜಕೀಯ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಸುಮಲತಾ ಗೆಲುವಿಗೆ ಕಾರಣಕರ್ತರೆಂದರೆ ಅದು ರೇವಣ್ಣ ಅವರಿಗೆ ಮ್ಯಾನ್ ಆಫ್ ದಿ ಮ್ಯಾಚ್ ನೀಡಬೇಕು. ಸುಮಲತಾ ಅವರ ನಿಂದನೆ, ನನ್ನನ್ನು ಆಕಸ್ಮಿಕ ಶಾಸಕ ಎನ್ನುವುದು ದುರಂಹಕಾರದ ಪರಮಾವಧಿ’ ಎಂದು ಕಿಡಿ ಕಾರಿದರು.

ADVERTISEMENT

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ 5,35, 282 ಮತಗಳು ಬಂದಿವೆ. ಕಳೆದ ಬಾರಿಗಿಂತ ಅತಿ ಹೆಚ್ಚು ಮತ ಬಿಜೆಪಿ ಪಾಲಾಗಿವೆ. ಈ‌ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂದು ಹುಡುಕುವಂತಾಗಿದೆ. ಇನ್ನು ಮುಂದೆ ಜಿಲ್ಲೆಯಲ್ಲಿ ನಡೆಯುವ ಎಲ್ಲಾ‌ ಚುನಾವಣೆಗಳಲ್ಲೂ ‌ಬಿಜೆಪಿ- ಜೆಡಿಎಸ್ ನಡುವೆ ಹಣಾಹಣಿ ನಡೆಯಲಿದೆ ಎಂದರು.

ನೂತನ ಸಂಸದರಾಗಿ ಆಯ್ಕೆಯಾಗಿರುವ ಪ್ರಜ್ವಲ್ ರೇವಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದ ಪ್ರೀತಂ, ತಂತ್ರಗಾರಿಕೆ ಮಾಡುವಲ್ಲಿ ನಾವು ವಿಫಲವಾಗಿದ್ದೇವೆ. ಹಾಗಾಗಿ ಸೋಲಾಗಿದೆ ಎಂದು ವಿಶ್ಲೇಷಿಸಿದರು.

ಪ್ರಜ್ವಲ್ ರೇವಣ್ಣ ರಾಜೀನಾಮೆ ನೀಡುವ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಮೊದಲು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಬೇಕು. ಆನಂತರ ಸ್ಪೀಕರ್ ಗೆ ರಾಜೀನಾಮೆ ಸಲ್ಲಿಸಬೇಕು, ಅದಕ್ಕೂ ಮೊದಲೇ ಮಾಧ್ಯಮಗಳ ಎದುರು ರಾಜೀನಾಮೆ ಹೇಳಿಕೆ ಸರಿಯಲ್ಲ’ ಎಂದರು.

‘ಜಿಲ್ಲೆಯ ಜನ‌ ಪಕ್ಷಾತೀತವಾಗಿ, ದೇವೇಗೌಡರು ಹಾಸನದಿಂದ ಸ್ಪರ್ಧಿಸಬೇಕು ಎಂಬ ಭಾವನೆ ಹೊಂದಿದ್ದರು. ಆದರೆ ಕುಟುಂಬ ರಾಜಕಾರಣದ ಫಲವಾಗಿ ತುಮಕೂರಿನಿಂದ ಸ್ಪರ್ಧಿಸಿ ಸೋತಿದ್ದಾರೆ. ಅವರ ಸೋಲಿಗೆ ಸಚಿವ ರೇವಣ್ಣ, ಪ್ರಜ್ವಲ್, ಭವಾನಿ ಕಾರಣ’ ಎಂದು ದೂರಿದರು.

‘ಆಪರೇಷನ್ ಕಮಲದ ಬಗ್ಗೆ ಮಾತನಾಡಲ್ಲ. ಯಾರಾದರೂ ಪಕ್ಷಕ್ಕೆ ಬಂದರೆ ಸ್ವಾಗತಿಸುವೆ. ಆಪರೇಷನ್ ಮಾಡಲು ನಾನು ಡಾಕ್ಟರ್ ಅಲ್ಲ. ನಿಂಬೆ ಹಣ್ಣು ಹಿಡಿದು ಶಾಸ್ತ್ರ ಹೇಳಲು ಜ್ಯೋತಿಷಿ ಅಲ್ಲ’ ಎಂದು ವ್ಯಂಗ್ಯವಾಡಿದರು.

ಗೋಷ್ಠಿಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಅಣ್ಣಪ್ಪ, ಮುಖಂಡರಾದ ಸುರೇಶ್ ಕುಮಾರ್, ಪ್ರಸನ್ನ ಕುಮಾರ್, ಮೊಗಣ್ಣಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.