ADVERTISEMENT

ಕಾರೇಹಳ್ಳಿ ಅರಣ್ಯದಲ್ಲಿ ರೌಡಿ ಶೀಟರ್‌ ಹತ್ಯೆ

ಮರಣೋತ್ತರ ಪರೀಕ್ಷೆ: ಪೊಲೀಸರು– ಸಾರ್ವಜನಿಕರ ನಡುವೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2021, 7:45 IST
Last Updated 12 ಆಗಸ್ಟ್ 2021, 7:45 IST
ಹತ್ಯೆಯಾಗಿರುವ ನವಾಜ್ ಮೃತದೇಹವನ್ನು ನೋಡಲು ಬಂದಿದ್ದ ಅವನ ಸ್ನೇಹಿತ ಷಣ್ಮುಖ ಎಂಬ ಯುವಕನ ಮೇಲೆ ಹಲ್ಲೆ ನಡೆಸಲು ಮುಂದಾದ ಕೆಲ ಯುವಕರನ್ನು ಪೊಲೀಸರು ತಡೆದರು
ಹತ್ಯೆಯಾಗಿರುವ ನವಾಜ್ ಮೃತದೇಹವನ್ನು ನೋಡಲು ಬಂದಿದ್ದ ಅವನ ಸ್ನೇಹಿತ ಷಣ್ಮುಖ ಎಂಬ ಯುವಕನ ಮೇಲೆ ಹಲ್ಲೆ ನಡೆಸಲು ಮುಂದಾದ ಕೆಲ ಯುವಕರನ್ನು ಪೊಲೀಸರು ತಡೆದರು   

ಅರಸೀಕೆರೆ: ನಗರ ಹೊರವಲಯದ ಮಾಲೇಕಲ್ ತಿರುಪತಿ ಬೆಟ್ಟದ ತಪ್ಪಲಿನಲ್ಲಿರುವ ಕಾರೇಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ರೌಡಿ ಶೀಟರ್ ಹತ್ಯೆಮಾಡಲಾಗಿದೆ.

ಹಲವು ಅಪರಾಧ ಪ್ರಕರಣಗಳು ಹಾಗೂ 2016ರಲ್ಲಿ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ವರುಣ್ ಹತ್ಯೆಯ ಪ್ರಮುಖ ಆರೋಪಿಯಾಗಿದ್ದ ರೌಡಿ ಶೀಟರ್ ನವಾಜ್ (26) ನನ್ನು ಮಂಗಳವಾರ ಸಂಜೆ ದುಷ್ಕರ್ಮಿಗಳು ಕೊಲೆ ಮಾಡಿದ್ದು, ಬುಧವಾರ ಪ್ರಕರಣ ಬೆಳಕಿಗೆ ಬಂದಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲು ಮುಂದಾದಾಗ ಮುಸ್ಲಿಮರು ವಿರೋಧಿಸಿ ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲೇ ನಡೆಸಬೇಕು ಎಂದು ಪ್ರತಿಭಟನೆ ನಡೆಸಿದರು. ಪೊಲೀಸರು ಮತ್ತು ಯುವಕರ ನಡುವೆಮಾತಿನ ಚಕಮಕಿನಡೆದು, ಗದ್ದಲ ಉಂಟಾಯಿತು. ಬಳಿಕ ಪೊಲೀಸರು ಎಲ್ಲರನ್ನೂ ಚದುರಿಸಿದರು. ಮುನ್ನೆಚ್ಚರಿಕೆಯಾಗಿಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ADVERTISEMENT

ಮರಣೋತ್ತರ ಪರೀಕ್ಷೆ ಬಳಿಕ ನಗರದ ಬಿ.ಎಚ್ ರಸ್ತೆಯ ಖಬರಸ್ತಾನ ದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಅಂತ್ಯಕ್ರಿಯೆ ನಡೆಯಿತು.

ಡಿವೈಎಸ್ಪಿ ನಾಗೇಶ್ಮಾತನಾಡಿ, ‘ನಗರದಲ್ಲಿ ಗಾಂಜಾ ಮಾರಾಟ ಜಾಲ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದನವಾಜ್, ಒಮ್ಮೆ ಜೈಲಿಗೆ ಹೋಗಿ ಬಂದಿದ್ದ. ಸ್ನೇಹಿತನ ಬಳಿ ಸುಮಾರು ₹ 1 ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದ. ಹಣ ಹಿಂದಿರುಗಿಸಲು ಸತಾಯಿಸುತ್ತಿದ್ದ. ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಹೋಗಿದ್ದ ಸಂದರ್ಭದಲ್ಲಿ ಹತ್ಯೆಯಾಗಿದೆ. ತನಿಖೆ ಚುರುಕುಗೊಳಿಸಿದ್ದು,ಸದ್ಯದಲ್ಲೇ ಕೊಲೆ ಆರೋಪಿಗಳನ್ನು ಬಂಧಿಸಲಾಗುವುದು’ ಎಂದರು.

ಅರಸೀಕೆರೆ ಮುಸ್ಲಿಂ ಜಮಾತ್ ಕಮಿಟಿ ಅಧ್ಯಕ್ಷ ಸಯ್ಯದ್ ಸರ್ದಾರ್ ಮಾತನಾಡಿ, ‘ಕೊಲೆಯಾಗಿರುವ ನವಾಜ್ ರೌಡಿ ಚಟುವಟಿಕೆ ಬಿಟ್ಟು ಹೋಟೆಲ್ ಮಾಡಿಕೊಂಡು ಜೀವನ ನಿರ್ವಹಿಸುತ್ತಿದ್ದ. ಕೊಲೆ ಆರೋಪಿ ಗಳನ್ನು ಪೊಲೀಸರು ತಕ್ಷಣವೇ ಬಂಧಿಸಿ, ಅವರ ಕುಟುಂಬಕ್ಕೆ ನ್ಯಾಯಒದಗಿಸಿ ಕೊಡಬೇಕು’ ಎಂದು ಒತ್ತಾಯಿಸಿದರು.

ನಗರಸಭೆ ಸದಸ್ಯ ಟಿಪ್ಪು ಸುಲ್ತಾನ್ ಮಾತನಾಡಿ, ‘ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವ ಮೂಲಕಮೃತನ ಕುಟುಂಬಕ್ಕೆ ನ್ಯಾಯ ಸಿಗಬೇಕು’ ಎಂದು ಆಗ್ರಹಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿ ಕಾರಿ ಬಿ.ಎನ್. ನಂದಿನಿ ನಗರಕ್ಕೆ ಭೇಟಿ ನೀಡಿ, ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.