ADVERTISEMENT

ಸಚಿವ ರೇವಣ್ಣ ವಿರುದ್ಧ ಕ್ರಮಕ್ಕೆ ಆಗ್ರಹ

ಅಕ್ರಮ ಮತದಾನ: ಬಿಜೆಪಿ ಏಜೆಂಟ್‌ ದೂರು

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 12:58 IST
Last Updated 25 ಏಪ್ರಿಲ್ 2019, 12:58 IST
ರೇವಣ್ಣ
ರೇವಣ್ಣ   

ಹಾಸನ:‘ಲೋಕಸಭೆ ಚುನಾವಣೆಯಲ್ಲಿ ಅಕ್ರಮ ಮತದಾನ ಮಾಡಿಸಿರುವ ಸಚಿವ ಎಚ್‌.ಡಿ.ರೇವಣ್ಣ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದು ಹೊಳೆನರಸೀಪುರ ತಾಲ್ಲೂಕು ಪಡುವಲಹಿಪ್ಪೆ ಮತಗಟ್ಟೆಯ ಬಿಜೆಪಿ ಏಜೆಂಟ್‌ರಾಗಿದ್ದ ಎಂ.ಎನ್.ರಾಜು ಮತ್ತು ಮಾಯಣ್ಣ ಜಿಲ್ಲಾ ಚುನಾವಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ಗೆ ದೂರು ಸಲ್ಲಿಸಿದ್ದಾರೆ.

‘ಏ. 18ರ ಬೆಳಗ್ಗೆ 9 ರಿಂದ 10 ಗಂಟೆ ಸಮಯದಲ್ಲಿ ಪಡವಲಹಿಪ್ಪೆಯ ಮತಗಟ್ಟೆ ಸಂಖ್ಯೆ 244ಕ್ಕೆ ಸಂಸದ ಎಚ್.ಡಿ.ದೇವೇಗೌಡ ಹಾಗೂ ಕುಟುಂಬದ ಸದಸ್ಯರು ಒಟ್ಟಾಗಿ ಮತದಾನಕ್ಕೆ ಬಂದರು. ರೇವಣ್ಣ ತಮ್ಮ ಹಕ್ಕು ಚಲಾಯಿಸಿದ ಬಳಿಕ ಹೊರ ಬಾರದೆ ಮತಗಟ್ಟೆಯಲ್ಲೇ ಉಳಿದುಕೊಂಡು ತಮ್ಮ ಕಡೆಯ ಯುವಕರನ್ನು ಒಳಗೆ ಕರೆಸಿಕೊಂಡು ಅಕ್ರಮ ಮತದಾನ ಮಾಡಿಸಿದ್ದಾರೆ’ ಎಂದು ದೂರಿದ್ದಾರೆ.

‘ಎಚ್‌.ಎಂ.ರವಿಕುಮಾರ್ ಎಂಬಾತ ಹೊಳೆನರಸೀಪುರ ಪಟ್ಟಣ ನಿವಾಸಿಯಾಗಿದ್ದರೂ ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ್ದಾರೆ. ಅದೇ ರೀತಿ ನಿಸಾರ್‌ ಅಹಮದ್‌ , ಪಿ.ಟಿ.ಪುರುಷೋತ್ತಮ್‌ ಎಂಬುವರು ಮತದಾನ ಮಾಡಿದ್ದಾರೆ. ಈ ರೀತಿಯ ಅನೇಕ ನಿದರ್ಶನಗಳು ಕಣ್ಣು ಮುಂದೆಯೇ ನಡೆದರೂ ಚುನಾವಣಾ ಅಧಿಕಾರಿ ಪ್ರೇಕ್ಷಕರಾಗಿದ್ದರು. ಈ ಪ್ರಕರಣವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಮತಗಟ್ಟೆ ಸಂಖ್ಯೆ 244ರ ಅಂದಿನ ವಿಡಿಯೊ ದೃಶ್ಯಾವಳಿ ಪರಿಶೀಲಿಸಿ ತಪ್ಪಿತಸ್ಥ ಅಧಿಕಾರಿ ಹಾಗೂ ರೇವಣ್ಣ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.