ಅರಸೀಕೆರೆ: ‘ನಗರದ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು ಸ್ವಚ್ಛ, ಸುಂದರ ಹಾಗೂ ಮಾದರಿ ನಗರವನ್ನಾಗಿಸುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು’ ಎಂದು ಗೃಹಮಂಡಳಿ ಅಧ್ಯಕ್ಷ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರದಲ್ಲಿ ₹8 ಕೋಟಿ ವೆಚ್ಚದಲ್ಲಿ ಕಂತೇನಹಳ್ಳಿ, ಸಾಯಿನಾಥ ರಸ್ತೆ ಹಾಗೂ ಬಿ.ಹೆಚ್.ರಸ್ತೆಯಿಂದ ಜಾಜೂರು ಗ್ರಾಮದವರೆಗೆ ರಸ್ತೆ ಡಾಂಬರೀಕರಣಕ್ಕೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ಸ್ವಚ್ಛ, ಸುಂದರ ನಗರ ನಿರ್ಮಾಣದ ಜೊತೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಅನುದಾನಗಳನ್ನು ತರಲಾಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷ ಪೂರೈಸುವ ಸಂಭ್ರಮ ಬಡವರು ಹಾಗೂ ಮಧ್ಯಮ ವರ್ಗದವರ ಏಳಿಗೆಗೆ ಗ್ಯಾರಂಟಿ ಯೋಜನೆ ನೀಡುವುದರ ಜೊತೆಗೆ ಅಭಿವೃದ್ಧಿ ಕೆಲಸ ಕಾರ್ಯಗಳು ಜೊತೆಯಲ್ಲೇ ನಿರಂತರವಾಗಿ ಸಾಗುತ್ತಿವೆ’ ಎಂದರು.
‘ನಗರದಲ್ಲಿ ಮೂಲಸೌಕರ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವಲ್ಲಿ ನಗರಸಭೆ ಕಾರ್ಯವೈಖರಿ ಪ್ರಶಂಸನೀಯ. ಮುಂದಿನ ದಿನಗಳಲ್ಲಿ ನಗರದಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು’ ಎಂದರು.
ನಗರಸಭಾ ಅಧ್ಯಕ್ಷ ಎಂ.ಸಮಿವುಲ್ಲಾ ಮಾತನಾಡಿ,‘ನಗರದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ, ವಿವಿಧ ಯೋಜನೆಗಳು ಹಾಗೂ ಅನುದಾನಗಳನ್ನು ನಗರಸಭೆಗೆ ಯಾವುದೇ ಅಡೆ ತಡೆವಿಲ್ಲದೇ ನೀಡುತ್ತಾ ಬಂದಿರುವ ಶಾಸಕರ ಉದಾರ ಮನೋಭಾವ ಶ್ಲಾಘನೀಯವಾಗಿದೆ. ನಗರದ ಎಲ್ಲಾ ವಾರ್ಡ್‌ಗಳಲ್ಲಿ ಯಾವುದೇ ಪಕ್ಷಪಾತವಿಲ್ಲದೇ ಸಾರ್ವಜನಿಕರ ಅಪೇಕ್ಷೆ ಮೇರೆಗೆ ಕೆಲಸಗಳನ್ನು ಮಾಡುತ್ತಾ ಬಂದಿರುವ ನಮಗೆ ಆತ್ಮ ತೃಪ್ತಿ ಇದೆ’ ಎಂದು ಹೇಳಿದರು.
ಉಪಾಧ್ಯಕ್ಷ ಮನೋಹರ್ ಮೇಸ್ತ್ರಿ, ನಗರಸಭೆ ಆಯುಕ್ತರು ಕೃಷ್ಣಮೂರ್ತಿ, ಲೋಕೋಪಯೋಗಿ ಅಧಿಕಾರಿಗಳಾದ ಬಾಲಾಜಿ, ಮಲೇಶ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮ ಶೇಖರ್, ಸದಸ್ಯರಾದ ವೆಂಕಟಮುನಿ, ಜಮೀಲ್, ಪ್ರೇಮ, ಮಲ್ಲಿಕಾರ್ಜುನ, ರೇವಣ್ಣ, ಯೋಗೇಶ್, ಹರೀಶ್, ಶುಭ ಮನೋಜ್, ಯುವರಾಜ್, ಇಮ್ರಾನ್, ಸಂತೋಷ್, ದರ್ಶನ್ ನಗರಸಭಾ ನಾಮಿನಿ ಸದಸ್ಯರಾದ ಕಿರಣ್‌ಕುಮಾರ್, ಸಂತೋಷ್ ಮಠ, ಮಾರುತಿ, ಸುಬ್ಬಣ್ಣ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.