ADVERTISEMENT

ನಿರಂತರ ಚಿಕಿತ್ಸೆಯಿಂದ ಕ್ಷಯ ರೋಗ ನಿರ್ಮೂಲನೆ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪರಮೇಶ್‌

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2021, 13:46 IST
Last Updated 24 ಮಾರ್ಚ್ 2021, 13:46 IST

ಹಾಸನ: ಕ್ಷಯ ರೋಗಿಗಳು ನಿರಂತರ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವ ಮೂಲಕ ಶೀಘ್ರ ಬೇಗ ಗುಣಮುಖರಾಗಬಹುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ. ಎ. ಪರಮೇಶ್ ಹೇಳಿದರು.

ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ನಗರದ ಹೇಮಾವತಿ ಪ್ರತಿಮೆ ಬಳಿ ಬುಧವಾರ ಏರ್ಪಡಿಸಿದ್ದ ಕ್ಷಯ ರೋಗ ನಿರ್ಮೂಲನೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕ್ಷಯ ರೋಗಕ್ಕೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸಾ ಸೌಲಭ್ಯಗಳನ್ನು ನೀಡಲಾಗುತ್ತದೆ. ರೋಗಿಗಳಿಗೆ ಚಿಕಿತ್ಸೆ ಪ್ರಾರಂಭದ ಹಂತದಿಂದ ಮುಗಿಯುವ ತನಕ ಅವರ ಬ್ಯಾಂಕ್ ಖಾತೆಗೆ ಮಾಸಿಕ ₹500 ರಂತೆ ₹ 12 ಸಾವಿರದವರೆಗೆ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ಎಲ್ಲಾ ಹಳ್ಳಿಗಳಲ್ಲಿ ಬೀದಿ ನಾಟಕದ ಮೂಲಕ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಮಾತನಾಡಿ, ಕ್ಷಯ ರೋಗಿಗಳು ನಿರಂತರ 6 ತಿಂಗಳು ಸೂಕ್ತ ಚಿಕತ್ಸೆ ಪಡೆದರೆ ರೋಗದಿಂದ ಮುಕ್ತಿ ಹೊಂದಬಹುದು. ನಿಯಮಿತವಾಗಿ ಔಷಧ ತೆಗೆದುಕೊಳ್ಳದಿದ್ದರೆ ಅಡ್ಡ ಪರಿಣಾಮಗಳು ಉಂಟಾಗಬಹುದು. ಎರಡು ವಾರಕ್ಕೂ ಹೆಚ್ಚು ಕೆಮ್ಮು, ಜ್ವರ, ಶೀತ ಕಂಡು ಬಂದಲ್ಲಿ ಹತ್ತಿರದ ಆಸ್ಪತ್ರೆ ಗಳಿಗೆ ಭೇಟಿ ನೀಡಿ ಕ್ಷಯ ರೋಗ ಪರೀಕ್ಷೆ ಮಾಡಿಸಬೇಕು. ರೋಗವು ಯಾರಿಗೆ ಬೇಕಾದರೂ ಬರಬಹುದು. ಅದರಲ್ಲೂ ಎಚ್‌ಐವಿ ಸೋಂಕಿತರು, ಮಧುಮೇಹ ಪೀಡಿತರು ಹಾಗೂ ಧೂಮಪಾನ ಮಾಡುವವರು ಬಹುಬೇಗ ಸೋಂಕಿಗೆ ಒಳಗಾಗುತ್ತಾರೆ ಎಂದು ಎಚ್ಚರಿಸಿದರು.

ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ನಾಗೇಶ್ ಆರಾಧ್ಯ ಮಾತನಾಡಿ, ಸರ್ಕಾರಿ ಕಟ್ಟಡಗಳಿಗೆ ಕೆಂಪು ದೀಪ ಅಳವಡಿಸುವ ಮೂಲಕ ಶಾಲಾ, ಕಾಲೇಜುಗಳಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸುವುದು ಹಾಗೂ ಬೀದಿ ನಾಟಕದ ಮೂಲಕ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕ್ಷಯ ರೋಗಿ ಕೆಮ್ಮಿದಾಗ ಮತ್ತು ಸೀನಿದಾಗ ಹೊರ ಬರುವ ರೋಗಾಣುಗಳು ಆರೋಗ್ಯವಂತ ವ್ಯಕ್ತಿಯ ದೇಹ ಸೇರಿ ಸೋಂಕು ಉಂಟಾಗುತ್ತದೆ. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ರೋಗ ನಿಯಂತ್ರಿಸಬಹುದು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಿಜಯ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಮಂಜುಳಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.