ADVERTISEMENT

ರಾಮೋತ್ಸವದ ವೇಳೆ ಚಾಕು ಇರಿತ: ಇಬ್ಬರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 7:24 IST
Last Updated 31 ಮಾರ್ಚ್ 2023, 7:24 IST

ಹಾಸನ: ಚನ್ನರಾಯಪಟ್ಟಣದಲ್ಲಿ ಗುರುವಾರ ರಾತ್ರಿ ರಾಮ ನವಮಿ ವೇಳೆ ನಡೆದ ಘರ್ಷಣೆಯಲ್ಲಿ ಇಬ್ಬರಿಗೆ ಚಾಕುವಿನಿಂದ ಇರಿದು ಗಾಯಗೊಳಿಸಲಾಗಿದೆ.

ಮುರುಳಿ, ಹರ್ಷ ಹಲ್ಲೆಗೊಳಗಾದ ಯುವಕರು. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮುರಳಿ ಎಂಬುವವರ ಕುತ್ತಿಗೆ ಹಾಗೂ ಹರ್ಷ ಎಂಬವರಿಗೆ ಹೊಟ್ಟೆಯ ಭಾಗಕ್ಕೆ ಇರಿಯಲಾಗಿದೆ.
ಘಟನೆಯ ಪೂರ್ಣ ವಿವರ: ಚನ್ನರಾಯಪಟ್ಟಣ ನಗರದ ಮೇಗಲಕೇರಿ ಕಾಡು ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ರಾಮೋತ್ಸವ ಮತ್ತು ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.

ದೇಗುಲದಿಂದ ಬಾಗೂರು ರಸ್ತೆಯ ದೊಡ್ಡ ಮಸೀದಿ ಸಮೀಪ ದೇವರ ಉತ್ಸವ ಬರುತ್ತಿದ್ದಂತೆಯೆ ಕೆಲವು ಯುವಕರು ಗಲಾಟೆ ಆರಂಭಿಸಿದ್ದಾರೆ. ಈ ಗಲಾಟೆ ವಿಕೋಪಕ್ಕೆ ತಿರುಗಿ ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ.
ಸ್ಥಳೀಯರು ಕೂಡಲೇ ಗಾಯಗೊಂಡ ಯುವಕರನ್ನು ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಯಲ್ಲಿ ಇಬ್ಬರು ಯುವಕರಿಗೆ ಚಿಕಿತ್ಸೆ ಮುಂದುವರಿದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ADVERTISEMENT

ಸ್ಥಳೀಯ ಪೊಲೀಸರೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಡಿವೈಎಸ್ಪಿ ರವಿಪ್ರಸಾದ್ ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಟ್ಟರು. ರಸ್ತೆಯ ಅಲ್ಲಲ್ಲಿ ನಾಕಾಬಂದಿ ಹಾಕಿದ್ದು, ಆರೋಪಿಗಳ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ. ಈ ಘಟನೆ ಕುರಿತು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.