ADVERTISEMENT

ಶ್ರದ್ಧಾ– ಭಕ್ತಿಯಿಂದ ವಿಜಯದಶಮಿ ಆಚರಣೆ

ಕೋವಿಡ್‌- 19 ಹಿನ್ನೆಲೆ ಸರಳ, ಸಾಂಪ್ರದಾಯಿಕ ಪೂಜೆ: ಜಿಲ್ಲೆಯ ವಿವಿಧೆಡೆ ಹಬ್ಬದ ಸಡಗರ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 3:58 IST
Last Updated 27 ಅಕ್ಟೋಬರ್ 2020, 3:58 IST
ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿರುವ ಬನ್ನಿ ಮಂಟಪಕ್ಕೆ ದೇವರ ಉತ್ಸವ ಮೂರ್ತಿಯನ್ನು ಟ್ರಾಕ್ಟರ್‌ನಲ್ಲಿ ತರಲಾಯಿತು
ಹಾಸನ ನಗರದ ಸಾಲಗಾಮೆ ರಸ್ತೆಯಲ್ಲಿರುವ ಬನ್ನಿ ಮಂಟಪಕ್ಕೆ ದೇವರ ಉತ್ಸವ ಮೂರ್ತಿಯನ್ನು ಟ್ರಾಕ್ಟರ್‌ನಲ್ಲಿ ತರಲಾಯಿತು   

ಹಾಸನ: ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ನಾಡಹಬ್ಬ ವಿಜಯದಶಮಿಯನ್ನು ಜನರು ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡಿದರು.

ಪ್ರತಿ ವರ್ಷದಂತೆ ಸಂಜೆ ನಗರದ ಸಾಲಗಾಮೆ ರಸ್ತೆಯಲ್ಲಿರುವ ಡಬಲ್ ಟ್ಯಾಂಕ್ ಉದ್ಯಾನದ ಬನ್ನಿ ಮಂಟಪದಲ್ಲಿ ನೂರಾರು ಭಕ್ತ ಸಮ್ಮುಖದಲ್ಲಿ ಬನ್ನಿ ಕಡಿಯಲಾಯಿತು. ಆದರೆ, ಈ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ಬನ್ನಿ ಮಂಟಪದ ಒಳಗೆ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿತ್ತು.

ತಾಲ್ಲೂಕು ಅಧಿಕಾರಿಗಳು, ತಳವಾರ ವಂಶಸ್ಥರು ಹಾಗೂ ಅರ್ಚಕರನ್ನು ಹೊರತುಪಡಿಸಿ ಉಳಿದವರೆಲ್ಲ ಕಾಂಪೌಂಡಿನ ಹೊರಗೆ ಹಾಗೂ ಸುತ್ತಲಿನ ಕಟ್ಟಡಗಳ ಮೇಲೆ ನಿಂತು ಪೂಜಾ ವಿಧಿವಿಧಾನ ವೀಕ್ಷಿಸಿದರು.

ADVERTISEMENT

ಸಂಪ್ರದಾಯ ಪ್ರಕಾರವಾಗಿ ನಗರದ ಪ್ರಮುಖ ದೇವಾಲಯಗಳಾದ ಆಂಜನೇಯ, ಸಿದ್ಧೇಶ್ವರ, ಶನೇಶ್ಚರ, ಮೈಲಾರಲಿಂಗೇಶ್ವರ ಹಾಗೂ ಚನ್ನಕೇಶವ ದೇವರ ಉತ್ಸವ ಮೂರ್ತಿಗಳನ್ನು ಹಾಸನಾಂಬ ದೇವಾಲಯದ ಆವರಣಕ್ಕೆ ತಂದು ಪೂಜಿಸಲಾಯಿತು. ಕೋವಿಡ್‌ ಕಾರಣದಿಂದ ಹಾಸನಾಂಬ ದೇವಸ್ಥಾನದಿಂದ ಉತ್ಸವ ಮೂರ್ತಿಗಳನ್ನು ಟ್ಯ್ರಾಕ್ಟರರ್ ಮೇಲಿರಿಸಿ ಸಾಲಗಾಮೆ ರಸ್ತೆಯ ಬನ್ನಿ ಮಂಟಪಕ್ಕೆ ತರಲಾಯಿತು.

ಪ್ರತಿವರ್ಷ ಹಾಸನಾಂಬಾ ದೇವಾಲಯದಿಂದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಮೇಲಿರಿಸಿ ಹೆಗಲ ಮೇಲೆ ಹೊತ್ತು ಬನ್ನಿ ಮಂಟಪದವರೆಗೆ ಮೆರವಣಿಗೆಯಲ್ಲಿ ತರಲಾಗುತ್ತಿತ್ತು. ಈ ವೇಳೆ ನಿವಾಸಿಗಳು ಮನೆಯ ಮುಂದೆ ರಂಗೋಲಿ ಇಟ್ಟು ದೇವರಿಗೆ ಪೂಜೆ ಸಲ್ಲಿಸಿ ಈಡುಗಾಯಿ ಒಡೆಯುತ್ತಿದ್ದರು. ಆದರೆ, ಈ ಬಾರಿ ಸರಳವಾಗಿ ಆಚರಿಸಿದ್ದು, ಅನೇಕರಲ್ಲಿ ನಿರಾಸೆ ಉಂಟಾಯಿತು.

ಪಂಚ ದೇವರ ಉತ್ಸವ ಮೂರ್ತಿಗಳನ್ನು ಬನ್ನಿ ಮಂಟಪದಲ್ಲಿ ಇರಿಸಿ ವಿಶೇಷ ಪೂಜೆ ನಡೆಸಲಾಯಿತು. ಪಂಜಿನ ಆರತಿ ಬೆಳಗಲಾಯಿತು. ನಂತರ ತಳವಾರ ವಂಶಸ್ಥನರಸಿಂಹರಾಜ ಅರಸ್ ಅವರು ರಾಜ ಕತ್ತಿಗೆ ಪೂಜೆ ಸಲ್ಲಿಸಿ, ಧಾರ್ಮಿಕ ವಿಧಿ ವಿಧಾನದಂತೆ ಬನ್ನಿ ಪ್ರತೀಕವಾದ ಬಾಳೆ ಕಂದಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಕತ್ತಿಯಿಂದ ಬನ್ನಿ ಕಡಿದರು.

ಹಾಸನಾಂಬ ದೇವಾಲಯದಿಂದ ಬರುತ್ತಿದ್ದ ಪಂಚ ದೇವರ ಉತ್ಸವದ ಜತೆಗೆ ಅನೇಕ ಭಕ್ತರು ಬಂದು ಬನ್ನಿ ಮಂಟಪದ ಸುತ್ತ ನೆರೆದಿದ್ದರು. ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಶ್ರದ್ಧಾ ಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಸಂಜೆ 5ಕ್ಕೆ ನರಸಿಂಹರಾಜ ಅರಸ್ ಬಾಳೆ ಕಂದನ್ನು ಕಡಿಯುತ್ತಿದ್ದಂತೆ ಬನ್ನಿ ಪಡೆಯಲು ಸುತ್ತಲು ನಿಂತಿದ್ದವರು ಮುಗಿಬಿದ್ದರು. ವಿವಿಧ ದೇವಾಲಯಗಳ ಅರ್ಚಕರು ಬನ್ನಿ ಎಲೆಗಳನ್ನು ಭಕ್ತರಿಗೆ ವಿತರಿಸಿದರು.

ನಗರ ಠಾಣೆ ಪಿಎಸ್‍ಐ ರಾಘವೇಂದ್ರ ಹಾಗೂ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.