ADVERTISEMENT

ಪ್ರಗತಿ ಪರಿಶೀಲನಾ ಸಭೆ: ವಾಗ್ವಾದ

ಆಸ್ಪತ್ರೆ ಹೆಚ್ಚುವರಿ ಕೊಠಡಿ ಉದ್ಘಾಟನೆ; ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ

​ಪ್ರಜಾವಾಣಿ ವಾರ್ತೆ
Published 16 ಮೇ 2021, 3:01 IST
Last Updated 16 ಮೇ 2021, 3:01 IST
ಅರಸೀಕೆರೆ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು
ಅರಸೀಕೆರೆ ಸರ್ಕಾರಿ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಕೋವಿಡ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು   

ಅರಸೀಕೆರೆ: ಸರ್ಕಾರಿ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಹೆಚ್ಚುವರಿ ವಾರ್ಡ್ ಉದ್ಘಾಟನೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಕೋವಿಡ್ 19ರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.‌

ಕೈ ಕೈಮಿಲಾಯಿಸುವ ಹಂತ ತಲುಪಿದಾಗ ಸಚಿವ ಗೋಪಾಲಯ್ಯ, ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.

ಸಭೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡುವ ಸಂದರ್ಭ ತಾಲ್ಲೂಕು ಆಸ್ಪತ್ರೆ ವೈದ್ಯರಾದ ಡಾ.ಕರಿಯಪ್ಪ ಕೋವಿಡ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಇದುವರೆಗೂ ಲಸಿಕೆ ಪಡೆಯದವರಿಗೆ ಕಡ್ಡಾಯವಾಗಿ ಲಸಿಕೆ ಪಡೆಯುವಂತೆ ಕಾನೂನು ರೂಪಿಸಬೇಕು. ತಾಲ್ಲೂಕು ಆಸ್ಪತ್ರೆಗೆ ಸರ್ಕಾರ ಸಮರ್ಪಕವಾಗಿ ಲಸಿಕೆ ನೀಡದೆ ಸೋಂಕು ಹೆಚ್ಚಳವಾಗಿ ಸಾವು ನೋವಿಗೆ ಕಾರಣವಾಗಿದೆ ಎಂದರು.

ADVERTISEMENT

ಮಧ್ಯ ಪ್ರವೇಶಿಸಿದ ಬಿಜೆಪಿ ಮುಖಂಡ, ನಗರ ಯೋಜನಾ ಪ್ರಾಧಿ ಕಾರದ ಅಧ್ಯಕ್ಷ ಎನ್.ಡಿ.ಪ್ರಸಾದ್, ವೈದ್ಯ ರನ್ನು ಬಹಿರಂಗವಾಗಿ ಪ್ರಶ್ನಿಸಬೇಡಿ. ಸರ್ಕಾರ ಲಸಿಕೆ ಪೂರೈಸುತ್ತಿಲ್ಲ ಎಂದು ಬಹಿರಂಗವಾಗಿ ಹೇಳಬಾರದು ಎಂದರು.

ಲಸಿಕೆ ಪಡೆಯಲು ಬರುವ ಜನರಿಗೆ ಏನು ಉತ್ತರ ಕೊಡಬೇಕು? ಸರ್ಕಾರ ಸಮರ್ಪಕವಾಗಿ ಲಸಿಕೆ ಪೂರೈಸಿದಿದ್ದರೆ ಇಂಥ ಸ್ಥಿತಿ ಆಗುತ್ತಿರಲಿಲ್ಲ ಎಂದಾಗ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.

ಸಚಿವ ಗೋಪಾಲಯ್ಯ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ಪಕ್ಷಾತೀ ತವಾಗಿ ಪ್ರಯತ್ನ ಮಾಡಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ. ಅರಸೀಕೆರೆ ಸರ್ಕಾರಿ ಆಸ್ಪತ್ರೆ ಉತ್ತಮವಾಗಿದ್ದು, ಸೋಂಕಿತರನ್ನು ಕೋವಿಡ್ ಚಿಕಿತ್ಸಾ ಕೇಂದ್ರಗಳಿಗೆ ಕರೆತರುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ, ತಹಶೀಲ್ದಾರ್ ವಹಿಸಬೇಕು ಎಂದರು.

ನೂತನ ಆಸ್ಪತ್ರೆ ವಾರ್ಡ್‌ನಲ್ಲಿರುವ ಬೆಡ್‌ಗಳ ಜತೆಗೆ ಇನ್ನೂ 70ಕ್ಕೂ ಹೆಚ್ಚು ಬೆಡ್ ವ್ಯವಸ್ಥೆ ಮಾಡಿಕೊಳ್ಳಬೇಕು. ಮುಖ್ಯಮಂತ್ರಿ ಬಳಿ ಮಾತನಾಡಿ ತಾಲ್ಲೂಕಿಗೆ ಸಮರ್ಪಕ ಲಸಿಕೆ ಪೂರೈಸುವಂತೆ ವಿನಂತಿಸಿ ಕೊಳ್ಳಲಾಗುವುದು. 50 ಬೆಡ್‌ಗಳಿಗೆ ಆಮ್ಲಜನಕ ಪೂರೈಕೆಗೆ ಸರ್ಕಾರದಿಂದ ವ್ಯವಸ್ಥೆ ಮಾಡಲಾಗುವುದು ಎಂದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಹೋಂ ಐಸೊಲೇಷನ್‌ನಲ್ಲಿರುವ ಸೋಂಕಿತರಿಗೆ ಕೋವಿಡ್ ಕೇರ್‌ ಕೇಂದ್ರದಲ್ಲಿ ಚಿಕಿತ್ಸೆ ನೀಡಬೇಕು ಎಂದರು.

ಬೇಲೂರು ಶಾಸಕ ಲಿಂಗೇಶ್, ವಿಧಾನ ಪರಿಷತ್ ಸದಸ್ಯ ಗೋಪಾಲಸ್ವಾಮಿ ಮಾತನಾಡಿದರು.

ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿ.ವಿ.ಟಿ.ಬಸವರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಕುಮಾರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎನ್.ಡಿ.ಪ್ರಸಾದ್, ತಾಲ್ಲೂಕು ಮಟ್ಟದ ಅಧಿಕಾರಿಗಳು, ಆಸ್ಪತ್ರೆ ವೈದ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.