ADVERTISEMENT

ಯಡಿಯೂರಪ್ಪನವರನ್ನು ಹೊಗಳಿದ್ದು ರಾಜಕೀಯ ಗಿಮಿಕ್‌: ಎಚ್.ಡಿ. ಕುಮಾರಸ್ವಾಮಿ

ವಿಮಾನ ನಿಲ್ದಾಣ ನಿರ್ಮಾಣದಿಂದ ರೈತರ ಸ್ಥಿತಿ ಸುಧಾರಿಸಲ್ಲ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 5:26 IST
Last Updated 1 ಮಾರ್ಚ್ 2023, 5:26 IST
ಅರಸೀಕೆರೆ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾತನಾಡಿದರು, ಜೆಡಿಎಸ್ ಅಭ್ಯರ್ಥಿ ಆಕಾಂಕ್ಷಿ ಅಶೋಕ್ ಬಾಣಾವರ, ಮುಖಂಡರಾದ ಎಚ್. ಗಂಗಾಧರ್, ಹರ್ಷವರ್ಧನ್, ಸಿಖಂದರ್ ಪಾಷಾ ಇತರರು ಉಪಸ್ಥಿತರಿದ್ದರು
ಅರಸೀಕೆರೆ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮಾತನಾಡಿದರು, ಜೆಡಿಎಸ್ ಅಭ್ಯರ್ಥಿ ಆಕಾಂಕ್ಷಿ ಅಶೋಕ್ ಬಾಣಾವರ, ಮುಖಂಡರಾದ ಎಚ್. ಗಂಗಾಧರ್, ಹರ್ಷವರ್ಧನ್, ಸಿಖಂದರ್ ಪಾಷಾ ಇತರರು ಉಪಸ್ಥಿತರಿದ್ದರು   

ಅರಸೀಕೆರೆ: ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ ಮಾತ್ರಕ್ಕೆ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ. ಚುನಾವಣಾ ಗಿಮಿಕ್‌ಗಾಗಿ ಪದೇ ಪದೇ ರಾಜ್ಯಕ್ಕೆ ಬರುತ್ತಿರುವ ಹಾಗೂ ರೈತರು ವಿಮಾನಗಳಲ್ಲಿ ಓಡಾಡಬೇಕು ಎಂದು ಹೇಳುತ್ತಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಮೊದಲು ದೇಶದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕ್ರಮ ಕೈಗೊಳ್ಳಲಿ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಚಿಕ್ಕಮಗಳೂರಿಗೆ ತೆರಳುವ ಮಾರ್ಗ ಮಧ್ಯೆ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ರಾಜ್ಯದ ಜನತೆ, ರೈತರ ಸಮಸ್ಯೆ ಮತ್ತು ರಾಜ್ಯದ ನೀರಾವರಿ ಸಮಸ್ಯೆ ಬಗ್ಗೆ ಮಾತನಾಡುತ್ತಿಲ್ಲ ಎಂದರು.

ಶಿವಮೊಗ್ಗಕ್ಕೆ ಬಂದಿದ್ದ ಅವರು, ಕೇವಲ ಒಂದು ಸಮಾಜವನ್ನು ಓಲೈಸುವ ನಿಟ್ಟಿನಲ್ಲಿ ಯಡಿಯೂರಪ್ಪ ಅವರನ್ನು ಹೊಗಳಿದ್ದಾರೆ. ಇದೆಲ್ಲ ಚುನಾವಣಾ ಗಿಮಿಕ್ ಅಷ್ಟೇ. ಈಗಲಾದರೂ ಯಡಿಯೂರಪ್ಪ ಅವರನ್ನು ಹೊಗಳಿದ್ದಾರಲ್ಲಾ ಸಂತಸದ ವಿಷಯ ಎಂದರು.

ADVERTISEMENT

ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ಅವರನ್ನು ಕೇಂದ್ರದ ಬಿಜೆಪಿ ನಾಯಕರು ಹೇಗೆ ನಡೆಸಿಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿದೆ. 75 ವರ್ಷ ತುಂಬಿದವರು ಸಕ್ರಿಯ ರಾಜಕಾರಣದಲ್ಲಿ ಇರಬಾರದು ಎಂಬ ವಿಷಯವನ್ನು ಯಡಿಯೂರಪ್ಪನವರಿಗೆ ಮೊದಲೇ ಹೇಳಬಹುದಿತ್ತು ಎಂದರು.

ರಾಜ್ಯದಲ್ಲಿ 48 ಲಕ್ಷ ರೈತರ ಕುಟುಂಬಗಳಿಗೆ ತಲಾ ₹ 2 ಸಾವಿರ ನೀಡುತ್ತಿರುವ ಕೇಂದ್ರ ಸರ್ಕಾರ ಬೀಗಬಾರದು. ಇದರಿಂದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಿಲ್ಲ. ರಸಗೊಬ್ಬರ ದರ ಏರಿಕೆಯಾಗುತ್ತಿದೆ. ಇತ್ತೀಚೆಗೆ ನಾನು ಶೃಂಗೇರಿ ಮತ್ತು ತೀರ್ಥಹಳ್ಳಿ ಭಾಗಗಳಲ್ಲಿ ಪ್ರವಾಸ ಮಾಡಿದಾಗ ಅಡಿಕೆ ಬೆಳೆ ಯಾವ ಸ್ಥಿತಿಯಲ್ಲಿದೆ ನೋಡಿದ್ದೇನೆ ಎಂದರು.

7 ನೇ ವೇತನ ಆಯೋಗ ಮತ್ತು ಹಳೆ ಪಿಂಚಣಿ ಯೋಜನೆ ಜಾರಿಗೆ ರಾಜ್ಯ ಸರ್ಕಾರಿ ನೌಕರರ ಸಂಘದವರು ಲಿಖಿತ ರೂಪದಲ್ಲಿ ಆದೇಶಿಸಿ ಎಂದು ಕೇಳುತ್ತಿದ್ದಾರೆ. ಇದರ ಬಗ್ಗೆ ಬಜೆಟ್‌ನಲ್ಲಿ ಮುಖ್ಯಮಂತ್ರಿ ಪ್ರಸ್ತಾಪಿಸಿಲ್ಲ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂಬ ಸತ್ಯ ತಿಳಿದೇ, ವೇತನ ಪರಿಷ್ಕರಣೆ ವಿಚಾರದಲ್ಲಿ ಬಿಜೆಪಿ ಸರ್ಕಾರ ಕಿವಿಗೆ ಹೂವು ಮುಡಿಸುತ್ತಿದೆ. ಇದನ್ನು ಜಾರಿಗೊಳಿಸಿದರೆ ಸರ್ಕಾರಕ್ಕೆ ₹ 18 ಸಾವಿರ ಕೋಟಿ ಹೆಚ್ಚುವರಿ ಹೊರೆ ಆಗಬಹುದು ಎಂಬುದು ನನ್ನ ಅಭಿಪ್ರಾಯ ಎಂದರು.

ಜೆಡಿಎಸ್ ಆಕಾಂಕ್ಷಿ ಅಶೋಕ್ ಬಾಣಾವರ, ಮುಖಂಡರಾದ ಹರ್ಷವರ್ಧನ್, ಸಿಕಂದರ್ ಪಾಷಾ, ಎಚ್. ಗಂಗಾಧರ್, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಇದ್ದರು.

‘ಆಗ ಕುಟುಂಬ ರಾಜಕಾರಣ ಬೇಕಿತ್ತು’

ಶಿವಲಿಂಗೇಗೌಡರು ರಾಜಕಾರಣಕ್ಕೆ ಪ್ರವೇಶ ಮಾಡಿ, ರಾಜಕೀಯವಾಗಿ ಬೆಳೆಯುವ ದಿನಗಳಲ್ಲಿ ಎಚ್.ಡಿ. ದೇವೇಗೌಡರ ಕುಟುಂಬ ರಾಜಕಾರಣದ ಅವಶ್ಯಕತೆ ಇತ್ತು. ಈಗ ಅವರಿಗೆ ಬೇಡವಾಗಿದೆ. ವಿಧಾನಸಭಾ ಅಧಿವೇಶನ ನಡೆಯುವಾಗ ಅವರ ಕ್ಷೇತ್ರದಿಂದ ಯಾವ ಜನಾಂಗದವರು ವಿಧಾನಸಭೆಯ ಗ್ಯಾಲರಿಯಲ್ಲಿ ಕುಳಿತಿರುತ್ತಾರೋ ಅವರನ್ನು ಓಲೈಸುವುದಕ್ಕಾಗಿ ಅವರನ್ನು ಮತ್ತು ಅವರ ಸಮಾಜವನ್ನು ಹೊಗಳುತ್ತಾರೆ. ನಾನು ಹತ್ತಿರವಿದ್ದು ಎಲ್ಲ ರೀತಿಯಲ್ಲೂ ಅರ್ಥೈಸಿಕೊಂಡಿದ್ದೇನೆ. ಹಾಸನ ಜಿಲ್ಲೆ ಮತ್ತು ಅರಸೀಕೆರೆ ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೊಡುಗೆಯೂ ಇದೆ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ಶೀಘ್ರವೇ ಬಗೆಹರಿಯಲಿದೆ. ಅರಸೀಕೆರೆ ಸೇರಿದಂತೆ ಉಳಿದ ಅಭ್ಯರ್ಥಿಗಳ ಪಟ್ಟಿ ಸದ್ಯದಲ್ಲೇ ಬಿಡುಗಡೆ ಆಗಲಿದೆ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.